ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ಹಾಲು, ವಿದ್ಯುತ್, ಡೀಸೆಲ್, ಅಗತ್ಯ ವಸ್ತುಗಳ ದರ ಹೆಚ್ಚಳವಾಗಿರುವ ಕಾರಣ ಟೀ, ಕಾಫಿ ಜೊತೆಗೆ ತಿಂಡಿಗಳ ದರವನ್ನು ಗರಿಷ್ಠ 5 ರೂ.ವರೆಗೆ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘವು ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದ್ದು, ಕಾಫಿ ಪುಡಿ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್ ಗಳಲ್ಲಿ ಕಾಫಿಯ ದರವನ್ನು ಶೇಕಡ 10 ರಿಂದ 15 ರಷ್ಟು ಅಥವಾ ಶೇಕಡ 2-3 ರೂಪಾಯಿ ಹೆಚ್ಚಳ ಮಾಡುವಂತೆ ಹೋಟೆಲ್ ಮಾಲೀಕರ ಸಂಘ ಸೂಚಿಸಿತ್ತು. ಇದರ ಬೆನ್ನಲ್ಲೇ ಕೆಲವು ಹೋಟೆಲ್ ಗಳಲ್ಲಿ ಕಾಫಿ ದರ ಹೆಚ್ಚಳ ಮಾಡಲಾಗಿತ್ತು, ಇದೀಗ ಹಾಲಿನ ದರ ಕೂಡ ಏರಿಕೆಯಾದ ಹಿನ್ನೆಲೆಯಲ್ಲಿ ಕಾಫಿ ಜೊತೆಗೆ ಟೀ ದರವನ್ನು ಕೂಡ 2-3 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇನ್ನು ತಿಂಡಿ ದರವನ್ನು 3 ರೂ.ನಿಂದ 5 ರೂ.ವರೆಗೆ ಹೆಚ್ಚಳ ಮಾಡುವಂತೆ ಹೋಟೆಲ್ ಮಾಲೀಕರ ಸಂಘ ಹೋಟೆಲ್ ಗಳಿಗೆ ತಿಳಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಹಾಲಿನ ದರ ಏರಿಕೆ ಆಗಿದೆ. ಜೊತೆಗೆ ಸಿಲೆಂಡರ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದೀಗ ಪುನಃ ತಿಂಡಿ ಏರಿಸಿದರೆ ಹೇಗೆ ಎಂಬ ಆತಂಕದಲ್ಲಿ ಗ್ರಾಹಕರಿದ್ದಾರೆ.