ಬೆಂಗಳೂರು : ವಿವಿಧ ಇಲಾಖೆಗಳಲ್ಲಿರುವ ಎಲ್ಲಾ ಪರೀಕ್ಷಾ ಪ್ರಾಧಿಕಾರಗಳ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಅಧಿನಿಯಮ, 2023ರ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ನೇಮಕಾತಿ ಮತ್ತು ಪರೀಕ್ಷಾ ಪ್ರಾಧಿಕಾರಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿ, ಅನುಚ್ಛೇದ-371-ಜೆ ಅನುಷ್ಠಾನ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಧಿನಿಯಮದ ನಿಬಂಧನೆಗಳು ಮತ್ತು ಅವುಗಳನ್ನು ಪಾಲಿಸುವ ಮಹತ್ವದ ಬಗ್ಗೆ ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳು ಸೇರಿದಂತೆ ಎಲ್ಲಾ ಪಾಲುದಾರರಿಗೆ ಅರಿವು ಮೂಡಿಸಲು ಅಭಿಯಾನ ಪ್ರಾರಂಭಿಸುವುದು, ಅಧಿನಿಯಮದ ನಿಬಂಧನೆಗಳಿಗೆ ಹೊಂದಿಕೊಂಡಂತೆ ಮೇಲ್ವಿಚಾರಣೆ ನಡೆಸಲು, ವರದಿ ಮಾಡಲು ಸ್ಪಷ್ಟವಾದ ಪ್ರಮಾಣಿತ ಕಾರ್ಯವಿಧಾನ ಮಾರ್ಗಸೂಚಿಗಳನ್ನು ಹೊರಡಿಸುವುದು, ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಾಲ ಕಾಲಕ್ಕೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧದಲ್ಲಿ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಪರೀಕ್ಷೆಗಳ ಸಮಯದಲ್ಲಿ ಅಕ್ರಮಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಬಲವಾದ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಶಂಕಿತ ಉಲ್ಲಂಘನೆಗಳನ್ನು ತ್ವರಿತವಾಗಿ ವರದಿ ಮಾಡಲು ಹಾಗೂ ಎಲ್ಲಾ ವರದಿಗಳನ್ನು ಗಂಭೀರವಾಗಿ ಪರಿಗಣಿಸಲು ಪ್ರತಿ ಇಲಾಖೆಯೊಳಗಿನ ಪರೀಕ್ಷಾ ಪ್ರಕ್ರಿಯೆಗಳ ಕುರಿತು ಕಾಲ ಕಾಲಕ್ಕೆ ಮೌಲ್ಯಮಾಪನ ಮಾಡಿ ವಿಮರ್ಶಿಸುವ ಪ್ರಕ್ರಿಯೆಗಳನ್ನು ಜಾರಿಗೊಳಿಸಲು ಪ್ರಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಅಧಿನಿಯಮದ ನಿಬಂಧನೆಗಳನ್ನು ಜಾರಿಗೊಳಿಸುವಲ್ಲಿ ಪೊಲೀಸ್ ಇಲಾಖೆಯು ಪ್ರಮುಖ ಪಾತ್ರ ವಹಿಸಬೇಕಾಗಿರುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಸಮನ್ವಯ ಸಾಧಿಸಲು ಕಣ್ಗಾವಲು ಮತ್ತು ಮೇಲ್ವಿಚಾರಣೆಗೆ ಸಹಕರಿಸಲು ಹಾಗೂ ಯಾವುದೇ ವರದಿಯಾದ ಉಲ್ಲಂಘನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುವಂತೆ ಕೋರಿದ್ದಾರೆ.
ಅಧಿನಿಯಮವು ಫೆಬ್ರವರಿ 27, 2025ರಿಂದ ಜಾರಿಗೆ ಬಂದಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ಸ್ಥಾಪಿಸಲಾಗಿದೆ. ಇದು ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಲು ನಿರ್ಣಾಯಕವಾಗಲಿದೆ ಎಂದು ತಿಳಿಸಿದ್ದಾರೆ
ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ರಾಜ್ಯ ಸರ್ಕಾರವು ನೇಮಕಾತಿ ಪ್ರಕ್ರಿಯೆಗಳಲ್ಲಿ ಗಮನಾರ್ಹವಾದ ಬದಲಾವಣೆಯನ್ನು ತರಬಹುದು ಮತ್ತು ಎಲ್ಲಾ ಅಭ್ಯರ್ಥಿಗಳನ್ನು ಅವರ ಅರ್ಹತೆಯ ಆಧಾರದ ಮೇಲೆ ನ್ಯಾಯಯುತವಾಗಿ ಮೌಲ್ಯಮಾಪನ ನಡೆಯುತ್ತದೆಂದು ವಿಶ್ವಾಸ ನಮಗಿದೆ.