ಬೆಂಗಳೂರು : ರಾಜ್ಯದಲ್ಲಿ ಬೆಲೆ ಏರಿಕೆ ಪರಿಣಾಮ ಜನರು ಹೊರಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು ನಂದಿನಿ ಹಾಲಿನ ದರ, ವಿದ್ಯುತ್ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದೀಗ ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದಂತೆ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಹೌದು ಬೆಲೆ ಏರಿಕೆ ಹೊಡೆತದಿಂದ ಜನ ಕಂಗಾಲಾಗಿದ್ದಾರೆ. ಹಾಲು, ಮೊಸರು ದರ ಏರಿಕೆ ಹಾಗೂ ಕಸ ತೆರಿಗೆ ಇತ್ಯಾದಿಗಳಿಂದ ಕಂಗಟ್ಟಿರುವ ಜನರಿಗೆ ಇದೀಗ ಡೀಸೆಲ್ ಬೆಲೆ ಹೆಚ್ಚಳದ ಬಿಸಿ ಪರೋಕ್ಷವಾಗಿ ತಟ್ಟಲಿದೆ. ಆದರೆ ಲಾರಿ ಮಾಲೀಕರಿಗೆ ನೇರವಾಗಿ ಹೊಡೆತ ಬೀಳಲಿದೆ. ಡಿಸೆಲ್ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮುಷ್ಕರ ಕುರಿತಂತೆ ಇಂದು ಲಾರಿ ಮಾಲೀಕರ ಸಂಘ ಸಭೆ ನಡೆಸಲಿದೆ.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ಶನಿವಾರ ಈ ಕುರಿತು ಸಭೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಮುಂದಿನ ವಾರ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಆರ್ ಷಣ್ಮುಗಪ್ಪ ತಿಳಿಸಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೆಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿದೆ.