ವಿವಿಧ ಕಾರಣಗಳಿಗೆ ತಾಯಿ ಮತ್ತು ಶಿಶು ಮರಣ ಸಂಭವಿಸುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ “ಕಿಲ್ಕಾರಿ” ಎಂಬ ಉಚಿತ ಮೊಬೈಲ್ ಆರೋಗ್ಯ ಸೇವೆ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಸಭೆಯಲ್ಲಿ ಪಾಲ್ಗೊಂಡು, ಗರ್ಭಿಣಿಯರ ಮನೆ ಭೇಟಿ ನಡೆಸಿ, ಕಾಸವರಹಟ್ಟಿ ಮತ್ತು ಹಳೇದ್ಯಾಮವ್ವನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಶುಕ್ರವಾರ ಗರ್ಭಿಣಿ ಮತ್ತು ಮಕ್ಕಳ ತಾಯಂದಿರ ಸಭೆ ನಡೆಸಿ “ಕಿಲ್ಕಾರಿ” ಯೋಜನೆಯ ಬಗ್ಗೆ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿಲ್ಕಾರಿ ಯೋಜನೆಯು ಹೊಸ ಮತ್ತು ಹಾಲಿ ಗರ್ಭಿಣಿಯರಿಗೆ ಗರ್ಭಧಾರಣೆ, ಹೆರಿಗೆ ಮತ್ತು ಮಕ್ಕಳ ಆರೈಕೆಯ ಬಗ್ಗೆ ಶಿಕ್ಷಣ ನೀಡಲು ಮೊಬೈಲ್ ಆಧಾರಿತ ಸೇವೆ. ಆರೋಗ್ಯ ಫಲಿತಾಂಶ ಹೆಚ್ಚಿಸಲು ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆ ಒಮ್ಮುಖವಾಗುವ ಯುಗದಲ್ಲಿ, ಕಿಲ್ಕಾರಿ ಕಾರ್ಯಕ್ರಮವು ಸಾರ್ವಜನಿಕ ಆರೋಗ್ಯದಲ್ಲಿ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯ ದಾರಿದೀಪವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು.
“ಕಿಲ್ಕಾರಿ” ಕಾರ್ಯಕ್ರಮವು ಮೊಬೈಲ್ ಆಧಾರಿತ ಸೇವೆಯಾಗಿದ್ದು, ಇದು 2016ರ ಜನವರಿ 15 ರಂದು ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಹೊಸ ಮತ್ತು ಹಾಲಿ ಗರ್ಭಿಣಿಯರಿಗಾಗಿ ಪ್ರಾರಂಭಿಸಲ್ಪಟ್ಟಿದ್ದು, ಇದು ಫಲಾನುಭವಿಗಳಿಗೆ ನೇರವಾಗಿ ತಲುಪುವ ಗುರಿ ಹೊಂದಿದೆ. ಹೊಸ ಮತ್ತು ನಿರೀಕ್ಷಿತ ತಾಯಂದಿರಿಗೆ ಪ್ರಮುಖ ಆರೋಗ್ಯ ಮಾಹಿತಿಯನ್ನು ನೇರವಾಗಿ ತಲುಪಿಸಲು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳುತ್ತದೆ. ಗರ್ಭಧಾರಣೆ, ಹೆರಿಗೆ ಮತ್ತು ಶಿಶುಪಾಲನೆಯ ಬಗ್ಗೆ ಸಂದೇಶಗಳನ್ನು ತಲುಪಿಸುವ ಮೂಲಕ ನವಜಾತ ಶಿಶುಗಳ ಆರೈಕೆಗಾಗಿ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಅವರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸಲಾಗುತ್ತಿದೆ. ಇದು ಗರ್ಭಧಾರಣೆಯ ಎರಡನೇ ತ್ರೈಮಾಸಿಕದಿಂದ ಮಗುವಿಗೆ ಒಂದು ವರ್ಷ ತುಂಬುವವರೆಗೆ ಕುಟುಂಬಗಳ ಮೊಬೈಲ್ ಫೋನ್‍ಗಳಿಗೆ ಗರ್ಭಧಾರಣೆ, ಹೆರಿಗೆ ಮತ್ತು ಮಕ್ಕಳ ಆರೈಕೆಯ ಬಗ್ಗೆ ಉಚಿತ, ಸಾಪ್ತಾಹಿಕ ಮತ್ತು ಸಮಯಕ್ಕೆ ಸೂಕ್ತವಾದ ಆಡಿಯೊ ಸಂದೇಶಗಳನ್ನು ನೇರವಾಗಿ ಒದಗಿಸುತ್ತದೆ. ಇದು ಪ್ರತಿ ವಾರದ ಆದ್ಯತೆಯ ಕ್ರಮಗಳನ್ನು ನೆನಪಿಸುತ್ತದೆ ಮತ್ತು ಬಲಪಡಿಸುತ್ತದೆ. ಈ ಕಾರ್ಯಕ್ರಮವು ತಾಯಂದಿರು ಮತ್ತು ಕುಟುಂಬಗಳಿಗೆ ಗರ್ಭಾವಸ್ಥೆಯಲ್ಲಿ ಮತ್ತು ಶೈಶವಾವಸ್ಥೆಯಲ್ಲಿ ಅನುಸರಿಸಬೇಕಾದ ನಡವಳಿಕೆಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳಿಸುತ್ತದೆ ಎಂದು ತಿಳಿಸಿದರು.
ಕಿಲ್ಕಾರಿ ಯೋಜನೆಯ ಈ ಕಾರ್ಯಕ್ರಮವು ಗರ್ಭಿಣಿಯರು ಮತ್ತು ಮಕ್ಕಳ ಜೀವಗಳನ್ನು ಹಲವಾರು ಅಪಾಯಗಳಿಂದ ರಕ್ಷಿಸುವುದಲ್ಲದೆ, ಆರೋಗ್ಯಕರ ಫಲಿತಾಂಶ ಖಚಿತಪಡಿಸುತ್ತದೆ ಎಂದರು.
ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ಆರ್.ಸಿ.ಹೆಚ್ ಫೋರ್ಟಲ್‍ನಲ್ಲಿ ನೊಂದಾಯಿತ ಸುಮಾರು 13002 ಗರ್ಭೀಣಿಯರು ಮತ್ತು 26952 ಒಂದು ವರ್ಷದೊಳಗಿನ ಮಕ್ಕಳ ತಾಯಂದಿರು ನಿರಂತರವಾಗಿ ಪ್ರತಿವಾರಕ್ಕೊಮ್ಮೆ ಕಿಲ್ಕಾರಿ ಕರೆಯನ್ನು ಸ್ವೀಕರಿಸುವುದರ ಮೂಲಕ ತಮ್ಮ ಗರ್ಭಾವಸ್ಥೆಯ ಮಾಹೆಯ ಅನುಸಾರ ಅಥವಾ ಮಗುವಿನ ಬೆಳವಣಿಗೆಯ ಮಾಹೆಯ ಅನುಸಾರವಾಗಿ ಆರೋಗ್ಯ ಸೇವೆಯ ಮಾಹಿತಿಯನ್ನು ಪಡೆದುಕೊಳ್ಳುತಿದ್ದಾರೆ. ಆಲಿಸಿರಿ ತಾಯಂದಿರೇ, ನಿಮ್ಮ ಕರುಳಿನ ಕುಡಿಯ ಪ್ರೇಮದ ನುಡಿಯ ಕಿಲ್ಕಾರಿ ಯೋಜನೆ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕಿಲ್ಕಾರಿ ಕಾರ್ಯಕ್ರಮವು ಚತುರತೆಯಿಂದ ಸರಳವಾಗಿದೆ. ಆದರೆ ಗಾಢವಾಗಿ ಪ್ರಭಾವಶಾಲಿಯಾಗಿದೆ. ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ನೋಂದಾಯಿಸಲ್ಪಟ್ಟ ಮಹಿಳೆಯರು, ಅವರ ಕೊನೆಯ ಮುಟ್ಟಿನ ಅವಧಿ ಅಥವಾ ಅವರ ಮಗುವಿನ ಜನ್ಮ ದಿನಾಂಕ ಆಧರಿಸಿ, ಪೂರ್ವ-ರೆಕಾರ್ಡ್ ಮಾಡಿದ ಆಡಿಯೊ ವಿಷಯದೊಂದಿಗೆ ವಾರಕ್ಕೊಮ್ಮೆ ಕರೆಯನ್ನು ಸ್ವೀಕರಿಸುತ್ತಾರೆ. ಈ ವಿಷಯವನ್ನು ಗರ್ಭಿಣಿಯರು ಮತ್ತು ಒಂದು ವರ್ಷದೊಳಗಿನ ಮಕ್ಕಳಿರುವ ತಾಯಂದಿರ ಮೊಬೈಲ್ ಪೋನ್‍ಗಳಿಗೆ ನೇರವಾಗಿ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಆರೋಗ್ಯಾಧಿಕಾರಿ ಡಾ.ಕಾವ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಆರೋಗ್ಯ ಸುರಕ್ಷತಾಧಿಕಾರಿಗಳಾದ ಆಶಾ, ಮನುಜಾ, ವೀಣಾ, ಸಮುದಾಯ ಆರೋಗ್ಯಾಧಿಕಾರಿಗಳಾದ ಶಾಂತಲಾ, ಸುರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಂ, ಆಶಾ ಕಾರ್ಯಕರ್ತೆ ರತ್ನಮ್ಮ, ಗರ್ಭಿಣಿ ಮಹಿಳೆಯರು, ಮಕ್ಕಳ ತಾಯಂದಿರು ಇದ್ದರು.