ನವದೆಹಲಿ: ವಾಹನ ಗುಜರಿ ನೀತಿಯು ಆಟೋ ಬಿಡಿಭಾಗಗಳ ಬೆಲೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಟೈಮ್ಸ್ ಡ್ರೈವ್ ಆಟೋ ಅವಾರ್ಡ್ಸ್ 2025 ಅನ್ನುದ್ದೇಶಿಸಿ ಮಾತನಾಡಿದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
ನಗರಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಇನ್ಪುಟ್ ವಸ್ತುಗಳ ಬೆಲೆಗಳು ಕಡಿಮೆಯಾಗುತ್ತಿದ್ದಂತೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯೂ ಹೆಚ್ಚಾಗುತ್ತದೆ ಎಂದು ಗಡ್ಕರಿ ಹೇಳಿದರು. “ನಾವು ಸ್ಕ್ರ್ಯಾಪಿಂಗ್ ನೀತಿಯನ್ನು ತಂದಿದ್ದೇವೆ, ಇದರಿಂದಾಗಿ ಆಟೋ ಕಾಂಪೊನೆಂಟ್ ಬೆಲೆಗಳು 30% ರಷ್ಟು ಕಡಿಮೆಯಾಗುತ್ತವೆ” ಎಂದು ಸಚಿವರು ಹೇಳಿದರು.
ಆಟೋ ಕಾಂಪೊನೆಂಟ್ ಗಳ ಬೆಲೆಗಳು ವಾಹನ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
ಭಾರತದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳ ಬೆಲೆಯೂ ಕಡಿಮೆಯಾಗಿದೆ ಎಂದು ಗಡ್ಕರಿ ಹೇಳಿದರು.
ಅದಾನಿ ಗ್ರೂಪ್ ಮತ್ತು ಟಾಟಾದಂತಹ ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸಲಿವೆ ಎಂದು ಅವರು ಹೇಳಿದರು.
ಲಿಥಿಯಂ-ಐಯಾನ್ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಅಂಶವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾದ ದೊಡ್ಡ ಲಿಥಿಯಂ ನಿಕ್ಷೇಪಗಳು ವಿಶ್ವದ ಒಟ್ಟು ಲಿಥಿಯಂ ನಿಕ್ಷೇಪದ 6% ರಷ್ಟಿದೆ, ಇದು ಉತ್ಪಾದನೆಗೆ ಸಾಕಾಗುತ್ತದೆ ಎಂದು ಅವರು ಹೇಳಿದರು