ಬೆಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿ ವರದಿ ನೀಡಿ ಒಳ ಮೀಸಲಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರೀತಿಯ ನೇಮಕಾತಿ, ಬಡ್ತಿ ಸೇರಿ ಇನ್ನಿತರ ಪ್ರಕ್ರಿಯೆಗಳನ್ನು ನಡೆಸದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಈ ವಾರದೊಳಗೆ ಮಧ್ಯಂತರ ವರದಿ ನೀಡುವಂತೆ ಸಭೆಯಲ್ಲಿ ಹಾಜರಿದ್ದ ವರದಿ ಹೊಣೆಗಾರಿಕೆ ಹೊಂದಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಗೆ ಸೂಚಿಸಲಾಗಿದೆ. ಬುಧವಾರದೊಳಗೆ ಮಧ್ಯಂತರ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ನಂತರ ಸಂಪೂರ್ಣ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ. ಅಂತಿಮ ವರದಿ ಸಂಪುಟದಲ್ಲಿ ಮಂಡಿಸಿ ಅಲ್ಲಿ ಚರ್ಚಿಸಿದ ಬಳಿಕ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಸರ್ಕಾರದ ಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮೊದಲಾದವರು ಇದ್ದರು.
ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಂಪುಟ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದೆ. pic.twitter.com/OKb8t5l4TU
— Siddaramaiah (@siddaramaiah) March 24, 2025