ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 21 ರ ಇಂದಿನಿಂದ ಏ.4ರವರೆಗೆ 2818 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896,447 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 8,42,817 ಹೊಸಬರು, 38,091 ಪುನರಾವರ್ತಿತರು ಹಾಗೂ 15,539 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯವ್ಯಾಪಿ ಪರೀಕ್ಷೆಗೆ 15881 ಶಿಕ್ಷಣ ಸಂಸ್ಥೆಗಳು ನೋಂದಾಯಿಸಿಕೊಂಡಿವೆ.
ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲ 2818 ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ. ಇಡೀ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದನ್ನು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತದೆ. ಎಲ್ಲ ಅಕ್ರಮಗಳು ಕಂಪ್ಯೂಟರ್ ಪರದೆಯಲ್ಲಿ ಗೋಚರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಮಾ.21 ರಿಂದ ಏ.04 ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಆವರಣವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ರ ಕಲಂ 163 ಮೇರೆಗೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಉಚಿತ ಬಸ್
ಕ.ಕ.ರ.ಸಾ ನಿಗಮವು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ:21.03.2025 ರಿಂದ 04.04.2025 ರವರೆಗೆ ಪರೀಕ್ಷೆಗೆ ಹಾಜರಾಗುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನುತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳುವಳಿಕೆ ನೀಡಲು ಸೂಚಿಸಲಾಗಿದೆ. ಮುಂದುವರೆದು ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮಕೈಗೊಳ್ಳುವುದು. ಚಾಲನಾ ಸಿಬ್ಬಂದಿಗಳು ಮೇಲ್ಕಂಡ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದು. ಈ ವಿಷಯವನ್ನು ಎಲ್ಲಾ ಘಟಕ ಮತ್ತು ಬಸ್ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಿ ಮೇಲ್ಕಂಡ ನಿರ್ದೇಶನಗಳನ್ನು ಜಾರಿಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್ಗಳನ್ನು ಮಾತ್ರ ಬಳಸಲು ಅವಕಾಶ
ಸ್ಟ್ರಾಟಿಸ್ಟಿಕ್ಸ್ ವಿಷಯದಲ್ಲಿ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಲು ಅನುಮತಿ
ಪರೀಕ್ಷೆಯ ಅಂತಿಮ ಬೆಲ್ ಹೊಡೆಯುವ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಡುವ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.
ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ
ಮೊಬೈಲ್ ಫೋನ್ , ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧ
ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಸೂಚನೆಗಳು:
1. 05.04.2025 (2) 28… (56, 57, 58 & 59 ವಿಷಯಗಳು) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.
2. ವಿಷಯ ಸಂಕೇತ 15 ಮತ್ತು 60ರ ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ.
3. ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುವುದು.
4. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ನೀಡಲಾಗುವುದು.
5. ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್. ವಿಷಯಗಳಿಗೆ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00ರವರೆಗೆ ಅವಧಿ ನಿಗದಿಪಡಿಸಿದೆ.
6. ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್. ವಿಷಯಗಳ ಪರೀಕ್ಷೆ ಬರೆಯಲು 3.00 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
7. ಎನ್.ಎಸ್.ಕ್ಯೂ.ಎಫ್. ವಿಷಯಗಳ ಪರೀಕ್ಷೆ ಬೆಳಗ್ಗೆ 10.00 ರಿಂದ 12.15ರವರೆಗೆ ನಡೆಯಲಿದೆ.
8. ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2.00 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
SSLC ಪರೀಕ್ಷೆ-1 ರ ವೇಳಾಪಟ್ಟಿ