ಚಿತ್ರದುರ್ಗ : ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 21 ರಿಂದ ಪ್ರಾರಂಭಗೊಂಡು, ಏಪ್ರಿಲ್ 04 ರವರೆಗೆ ಜರುಗಲಿವೆ. ಜಿಲ್ಲೆಯ 24,416 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ 82 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಮಾ. 21 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷೆಯನ್ನು ಸುಗಮವಾಗಿ ಜರುಗಿಸಲು ಅನುಕೂಲವಾಗುವಂತೆ 82 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 24,416 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ದಿನಗಳಂದು ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ಸಾಗಿಸುವ ಸಲುವಾಗಿ ಈಗಾಗಲೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, 5472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಿದ್ದು, 6,635 ವಿದ್ಯಾರ್ಥಿಗಳು. ಹಿರಿಯೂರು ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳಿದ್ದು, 3,677 ವಿದ್ಯಾರ್ಥಿಗಳು. ಹೊಳಲ್ಕೆರೆ ತಾಲ್ಲೂಕಿನಲ್ಲಿ 08 ಪರೀಕ್ಷಾ ಕೇಂದ್ರಗಳಿದ್ದು, 2,854 ವಿದ್ಯಾರ್ಥಿಗಳು. ಹೊಸದುರ್ಗ ತಾಲ್ಲೂಕಿನಲ್ಲಿ 11 ಪರೀಕ್ಷಾ ಕೇಂದ್ರಗಳಿದ್ದು, 3,195 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 08 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ 2,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಯ ಪಾವಿತ್ರತೆ ಕಾಪಾಡಲು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೇಂದ್ರೀಕೃತ ವೀಕ್ಷಣಾ ಘಟಕವನ್ನು ಸ್ಥಪಿಸಿದ್ದು, ಒಟ್ಟು 24 ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ನೋಡಲ್ ಅಧಿಕಾರಿಗಳು ಮತ್ತು ವೀಕ್ಷಕರ ತಂಡ ರಚಿಸಲಾಗಿದೆ. ಇದರ ಜೊತೆಗೆ ತಾಂತ್ರಿಕ ಸಹಾಯಕರನ್ನು ಕೂಡ ನಿಯೋಜಿಸಲಾಗಿದೆ. ಜಿ.ಪಂ. ಸಿಇಒ ಅವರು ಕೇಂದ್ರೀಕೃತ ವೀಕ್ಷಣಾ ಘಟಕಕಕ್ಕೆ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಿರುತ್ತಾರೆ. ಒಟ್ಟು 82 ಪರೀಕ್ಷಾ ಕೇಂದ್ರಗಳಲ್ಲಿನ 1135 ಕೊಠಡಿಗಳಿಗೆ ವೆಬ್‍ಕಾಸ್ಟಿಂಗ್‍ಗಾಗಿ ಸಿಸಿಟಿವಿ ಅಳವಡಿಸಲಾಗಿರುತ್ತದೆ. ಈ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ವಿತರಿಸಲು ಹಾಗೂ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಸಂಬಂಧಪಟ್ಟ ಹಂತಕ್ಕೆ ತಲುಪಿಸಲು 35 ಮಾರ್ಗಾಧಿಕಾರಿಗಳನ್ನು ಈಗಾಗಲೆ ನೇಮಕ ಮಾಡಿಕೊಳ್ಳಲಾಗಿದ್ದು, ಈ ತಂಡಕ್ಕೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ತಜ್ಞರನ್ನು ಪ್ರಥಮ ಚಿಕಿತ್ಸಾ ವ್ಯವಸ್ಥೆಯೊಂದಿಗೆ ನಿಯೋಜಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಹಾಗೂ ಪರೀಕ್ಷಾ ಸುರಕ್ಷತಾ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ನಿಷೇಧಿತ ಪ್ರದೇಶವೆಂದು ಘೊಷಣೆ ಮಾಡಲಾಗಿದೆ. ಪರೀಕ್ಷಾ ಸಮಯಗಳಲ್ಲಿ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಲು ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ನಿರ್ದೇಶನ ನೀಡಲಾಗಿದೆ.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಸುಗಮವಾಗಿ ಹಾಗೂ ವ್ಯವಸ್ಥಿತ ರೀತಿಯಲ್ಲಿ ಗೊಂದಲಕ್ಕೆ ಅವಕಾಶವಾಗದಂತೆ ಕೈಗೊಳ್ಳಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಿಸಿ ಟಿವಿ, ವೆಬ್‍ಕಾಸ್ಟಿಂಗ್ ಸೇರಿದಂತೆ ಅನ್ಯ ವಿಷಯಗಳ ಬಗ್ಗೆ ಅನಗತ್ಯ ಆಲೋಚನೆ ಮಾಡದೆ, ಅಭ್ಯಾಸದ ಕಡೆ, ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು. ಯಾವುದೇ ಊಹಾಪೋಹ ಹಾಗೂ ವದಂತಿಗಳಿಗೆ ಕಿವಿಗೊಡದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು, ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ಹೀಗಿದೆ SSLC ಪರೀಕ್ಷಾ ವೇಳಾಪಟ್ಟಿ
ಮಾ. 21 ರಂದು ಪ್ರಥಮ ಭಾಷೆ. ಮಾ. 24 ರಂದು ಗಣಿತ, ಮಾ. 26 ರಂದು ಇಂಗ್ಲೀಷ್, ಮಾ. 29 ರಂದು ಸಮಾಜ ವಿಜ್ಞಾನ, ಏಪ್ರಿಲ್ 02 ರಂದು ವಿಜ್ಞಾನ ಹಾಗೂ ಏಪ್ರಿಲ್ 04 ರಂದು ಹಿಂದಿ + ಎನ್‍ಎಸ್‍ಕ್ಯೂಎಫ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬೆಳಿಗ್ಗೆ 10 ರಿಂದ ಪ್ರಾರಂಭವಾಗಲಿದೆ.
BREAKING: ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಓರ್ವ ವಿದೇಶಿ ಪ್ರಜೆ ಸಾವು, ನಾಲ್ವರಿಗೆ ಗಾಯ
ನಕಲಿ ಕೀಟ ನಾಶಕ ಉತ್ಪನ್ನಗಳ ಹಾವಳಿ ತಪ್ಪಿಸಲು ಕ್ರಮ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್