ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತವೊಂದು ಸಂಭವಿಸಿದ್ದು, ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ಮುರಿದುಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮತಿ (35) ಮತ್ತು ಸೋನಿ (36) ಎಂಬುವವರು ಮೃತಪಟ್ಟಿದ್ದಾರೆ.
ಮೃತ ಸೋನಿ ಕುಮಾರಿ ಬಿಹಾರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತ ಸುಮತಿ ತಮಿಳುನಾಡು ಮೂಲದವರಾಗಿದ್ದು, ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದರು. ಇಬ್ಬರು ತಮ್ಮ ಮಕ್ಕಳನ್ನು ಟ್ಯೂಷನ್ ನಿಂದ ಮನೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.