ಬೆಂಗಳೂರು : ಸಾಕು ನಾಯಿ ಅಥವಾ ಅಪರಿಚಿತ ಬೀದಿ ನಾಯಿ ಕಚ್ಚಿದ್ದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ರೇಬೀಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ರೇಬೀಸ್ ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸಿ.
ನಾಯಿಗಳು, ಬೆಕ್ಕುಗಳು, ಮೇಕೆಗಳು, ಹಸುಗಳು ಮತ್ತು ಸಾಕುಪ್ರಾಣಿಗಳು ಕಚ್ಚುವುದರಿಂದ ಮನುಷ್ಯರಿಗೆ ರೇಬೀಸ್ ಸೋಂಕು ತಗುಲುತ್ತದೆ. ರೇಬೀಸ್ ನಾಯಿ ಕಡಿತದಿಂದ ಮಾತ್ರವಲ್ಲ, ಅವುಗಳ ಲಾಲಾರಸವು ನಮ್ಮ ದೇಹದ ಮೇಲಿನ ಗಾಯಗಳ ಸಂಪರ್ಕದಿಂದಲೂ ಹರಡುತ್ತದೆ.
ಸಾಮಾನ್ಯವಾಗಿ, ನಾಯಿ ಕಚ್ಚಿದರೆ ಅಥವಾ ಗೀಚಿದರೆ, ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಸೋಪು ಮತ್ತು ನೀರಿನಿಂದ ತೊಳೆಯಬೇಕು. ನಾಲ್ಕು ಡೋಸ್‌ಗಳ ARV ಲಸಿಕೆಗಳನ್ನು ಪಡೆಯುವ ಮೂಲಕ ರೇಬೀಸ್ ಅನ್ನು ತಡೆಗಟ್ಟಬಹುದು. ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರೇಬೀಸ್ ಲಸಿಕೆಯನ್ನು ನೀಡಲಾಗುತ್ತದೆ.
ನಾಯಿ ಕಚ್ಚಿದ ನಂತರ ಮೊದಲ, ಮೂರನೇ, ಏಳನೇ ಮತ್ತು 28 ನೇ ದಿನದಂದು ಲಸಿಕೆಗಳನ್ನು ಹಾಕಬೇಕು. ಇದಲ್ಲದೆ, ಗಾಯವು ಆಳವಾಗಿದ್ದರೆ, ಹೆಚ್ಚುವರಿ ಇಮ್ಯುನೊಗ್ಲಾಬ್ಯುಲಿನ್ ಲಸಿಕೆಯನ್ನು ಆ ಪ್ರದೇಶಕ್ಕೆ ಚುಚ್ಚಲಾಗುತ್ತದೆ. ಆದ್ದರಿಂದ, ಸಾರ್ವಜನಿಕರು ನಾಯಿ ಮತ್ತು ಸಾಕುಪ್ರಾಣಿಗಳ ಕಡಿತವನ್ನು ನಿರ್ಲಕ್ಷಿಸಬಾರದು ಮತ್ತು ಸಮಯಕ್ಕೆ ಸರಿಯಾಗಿ ARV ಲಸಿಕೆಯನ್ನು ಪಡೆಯಬೇಕು ಎಂದು ಸೂಚಿಸಲಾಗಿದೆ.
ನಾಯಿ ಕಡಿದಾಗ ಅನುಸರಿಸಬೇಕಾದ ವಿಧಾನಗಳು:
ಮೊದಲನೆ ಹೆಜ್ಜೆ: ಗಾಯವನ್ನು ತಕ್ಷಣವೇ ನೀರು ಹಾಗೂ ಸಾಬೂನಿನಿಂದ ತೊಳೆಯಿರಿ, ಪಾವಿಡೋನ್ ಐಯೋಡಿನ್‍ನಂಥ ಆಂಟಿಸೇಪ್ಟಿಕ್‍ಗಳನ್ನು ಹಚ್ಚಿರಿ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ಎರಡನೇ ಹೆಜ್ಜೆ: ವೈದ್ಯರ ನಿರ್ದೇಶನದ ಮೇರೆಗೆ ರೇಬೀಸ್ ಲಸಿಕೆಯ ಪೂರ್ಣ ಕ್ರಮವನ್ನು ತೆಗೆದುಕೊಳ್ಳಬೇಕು.
ಮೂರನೇ ಹೆಜ್ಜೆ: ತೀವ್ರವಾದ ಕಡಿತದ ಸಂದರ್ಭಗಳಲ್ಲಿ ಗಾಯಕ್ಕೆ ರೇಬೀಸ್ ಉಮ್ಯೂನೋಗ್ಲೋಬುಲಿನ್ ಚುಚ್ಚುಮದ್ದು ಪಡೆಯಬೇಕು.
ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಸಾರ್ವಜನಿಕರು ಯಾವುದೇ ಪ್ರಾಣಿ ಕಡಿತ ಸಂದರ್ಭದಲ್ಲಿ ಗಾಬರಿ ಪಡದೇ ನಾಯಿ ಅಥವಾ ಪ್ರಾಣಿ ಕಡಿತದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕು.
ಡೋಸ್ ವಿವರ: 1ನೇ ಡೋಸ್ ಮೊದಲ ದಿವಸ, 2ನೇ ಡೋಸ್ ಮೂರನೇ ದಿವಸ, 3ನೇ ಡೋಸ್ 7ನೇ ದಿವಸ, 4ನೇ ಡೋಸ್ 14ನೇ ದಿವಸ, 5ನೇ ಡೋಸ್ 28ನೇ ದಿವಸ.