ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರು ಶೇ. 24.1ರಷ್ಟಿದ್ದು, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸಲಾಗಿತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭಾ ಅಧಿವೇಶನದ ಮಧ್ಯಾಹ್ನದ ಕಲಾಪದ ವೇಳೆಯಲ್ಲಿ ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಎಸ್ ಸಿ ಪಿ/ಟಿ ಎಸ್ ಪಿ ಯೋಜನೆಯು 2013 ರಲ್ಲಿ ಜಾರಿಗೆ ಬಂದಿದ್ದು, ಈ ಯೋಜನೆಗೆ ಒದಗಿಸಿರುವ ಎಲ್ಲಾ ಅನುದಾನವನ್ನು ಅಧಿಕಾರಿಗಳು ಆ ವರ್ಷದಲ್ಲಿಯೆ ಖರ್ಚು ಮಾಡಬೇಕು. ಸಕಾಲದಲ್ಲಿ ಅನುದಾನ ವೆಚ್ಷವಾಗದ ಪಕ್ಷದಲ್ಲಿ ಮುಂದಿನ ವರ್ಷಕ್ಕೆ ಮುಂದುವರೆಯುವುದು ಇದನ್ನು ಬೇರೆ ಯೋಜನೆಗಳಿಗೆ ವೆಚ್ಚ ಮಾಡುವಂತಿಲ್ಲ ಎಂದರು.
ಈ ವರ್ಷದ ಆಯವ್ಯಯದಲ್ಲಿ 3 ಲಕ್ಷದ 71ಸಾವಿರದ 273 ಕೋಟಿ ಇದ್ದು ಇದರಲ್ಲಿ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆಗೆ 27 ಸಾವಿರದ 674 ಕೋಟಿ ಒದಗಿಸಲಾಗಿದೆ ಎಂದರು. ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಬಡ್ತಿ ಮೀಸಲಾತಿ ಜಾರಿ ಮಾಡಿದ್ದೇವೆ. ಗುತ್ರಿಗೆ ಮೀಸಲಾತಿ ಮಾಡಿದ್ದೇವೆ. 7ಡಿ ರದ್ದು ಮಾಡಿದ್ದೇವೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ರಕ್ಷಣೆ ಕೊಡುವ ಕಾರ್ಯ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ್ದೇವೆ. ಸಮಾಜದಲ್ಲಿ ಅಪರಾದ ಮಾಡಿದವರಿಗೆ ಕಠಿಣವಾದ ಶಿಕ್ಷೆ ಕೊಡಿಸುವಲ್ಲಿ ಗೃಹ ಇಲಾಖೆಯು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪೋಲಿಸರು 75 ಕೋಟಿ ರೂ.ಗಳ ಡ್ರಗ್ಸ್ ಸೀಜ್ ಮಾಡಿದ್ದು, ನಮ್ಮ ಕಾಲದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಡ್ರಗ್ಸ್ ಮಾಫಿಯಾ ಕಡಿಮೆಯಾಗುತ್ತಿದ್ದು, ಇದನ್ನು ಶೂನ್ಯಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರು.
ಹಾಲು ಉತ್ಪಾದಕರಿಗೂ ಹಂತ ಹಂತವಾಗಿ ಹಾಲಿನ ಪ್ರೋತ್ಸಾಹ ಧನ ನೀಡುತ್ತಿದ್ದು, ಹಿಂದಿನ ಸರ್ಕಾರ ಬಾಕಿ ಉಳಿಸಿರುವ 600 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಎಂದರು. ಇಂಧನ ದರ, ಸಿಬ್ಬಂದಿಯ ವೇತನ ಹೆಚ್ಚಾದಂತ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಬಸ್ ದರ ಏರಿಸಲಾಯಿತು ಎಂದರು. ರೈತರ ಆತ್ಮಹತ್ಯೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಗಳು, ರೈತರ ಆತ್ಮಹತ್ಯೆಯು ರಾಜ್ಯದಲ್ಲಿ ಕಡಿಮೆಯಾಗಿದ್ದು, ಈ ವರ್ಷ ಫೆಬ್ರವರಿ ಅಂತ್ಯದವರೆಗೆ 644 ರೈತರ ಆತ್ಮಹತ್ಯೆಗಳು ನಡೆದಿದ್ದು, ಇದನ್ನು ಪೂರ್ಣವಾಗಿ ನಿಲ್ಲಿಸಲು ಸರ್ಕಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಗಾಗಿ ವೈಟ್ ಟ್ಯಾಪಿಂಗ್ ಗೆ 1700 ಕೋಟಿ, ಗುಂಡಿ ಮುಚ್ಚಲು ಪ್ರತಿ ವಾರ್ಡಿಗೆ 15 ಲಕ್ಷ ರೂ.ಗಳನ್ನು, ಡಾಂಬರೀಕರಣ ಮಾಡಲು 700 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ ಎಂದರು. ಗೌರವಾನ್ವಿತ ರಾಜ್ಯಪಾಲರು ಮಾಡಿರುವ ಭಾಷಣ ಸತ್ಯವಾಗಿದೆ ಎಂದ ಮುಖ್ಯಮಂತ್ರಿಗಳು, 3ನೇ ಮಾರ್ಚ್ 2025ರಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲಿ ಸೇರಿರುವ ವಿಧಾನಸಭೆಯ ಸದಸ್ಯರಾದ ನಾವು ಗೌರವಾನ್ವಿತ ರಾಜ್ಯಪಾಲರಿಗೆ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.