ಬೆಂಗಳೂರು : ರಾಜ್ಯ ಸಚಿವ ಸಂಪುಟ ಸಭೆಯುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ (ತಿದ್ದುಪಡಿ) ವಿಧೇಯಕ -2025ಕ್ಕೆ ಒಪ್ಪಿಗೆ ನೀಡಿದ್ದು, ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳಿಗೆ ‘ಬಿ-ಖಾತಾ’ ನೀಡಿ, ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಪಂಚಾಯಿತಿಗಳಿಗೆ ವಾರ್ಷಿಕ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವಂತೆ ಗ್ರಾಮೀಣ ಪ್ರದೇಶಗಳಲ್ಲೂ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳು, ನಿವೇಶನಗಳು, ಕಟ್ಟಡಗಳಿಗೆ ‘ಬಿ-ಖಾತಾ’ ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅನಧಿಕೃತ ಬಡಾವಣೆಗಳ ರಚನೆ ತಡೆಗಟ್ಟಲು ಇ-ಸ್ವತ್ತು ತಂತ್ರಾಂಶವನ್ನು 2013 ರ ಜೂನ್ 15 ರಿಂದ ಜಾರಿಗೊಳಿಸಿದ್ದು, ಪಂಚತಂತ್ರ ತಂತ್ರಾಂಶದಲ್ಲಿ 1.40 ಕೋಟಿ ಆಸ್ತಿಗಳ ವಿವರ ನಮೂದಾಗಿದೆ. ಆದರೆ ಇ-ಸ್ವತ್ತು ತಂತ್ರಾಂಶದಲ್ಲಿ 40 ಲಕ್ಷ ಆಸ್ತಿಗಳಷ್ಟೇ ನೋಂದಣಿಯಾಗಿದ್ದು, ಬಾಕಿ 96 ಲಕ್ಷ ಆಸ್ತಿಗಳು ಇ-ಸ್ವತ್ತು ವ್ಯಾಪ್ತಿಯಿಂದ ಹೊರಗಿವೆ.
ಸದ್ಯ ಇ-ಸ್ವತ್ತು ವ್ಯಾಪ್ತಿಯಲ್ಲಿರುವ 40 ಲಕ್ಷ ಆಸ್ತಿಗಳ ಪೈಕಿ 34 ಲಕ್ಷ ಆಸ್ತಿಯಿಂದ 800 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಾಕಿ 96 ಲಕ್ಷ ಆಸ್ತಿಗಳು ಬಿ-ಖಾತಾ ಪಡೆದರೆ ಪಂಚಾಯಿತಿಗಳಿಗೆ ಎರಡು-ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಾಗಲಿದೆ. ಈ ತೀರ್ಮಾನಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯಿದೆಗೆ ಸೆಕ್ಷನ್ 199(ಬಿ) ಮತ್ತು 199(ಸಿ) ಸೇರ್ಪಡೆ ಮೂಲಕ ಇದೇ ವಿಧಾನಮಂಡಲ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡಲು ಕಾಯ್ದೆಗೂ ತಿದ್ದುಪಡಿ ತರಲಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮೀಣ ಭಾಗದಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳಿಗೆ ನಗರ, ಪಟ್ಟಣ ವ್ಯಾಪ್ತಿಯಲ್ಲಿ ನೀಡುವಂತೆಯೇ ಬಿ-ಖಾತಾ ವಿತರಣೆಗೆ ನಿರ್ಧಾರವನ್ನು ಸರ್ಕಾರ ಶೀಘ್ರವೇ ಪ್ರಕಟಿಸೋ ಸಾಧ್ಯತೆ ಇದೆ