ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು, ತಾಯಂದಿರು ಹಾಗೂ ಮಕ್ಕಳು ತೆಗೆದುಕೊಳ್ಳಬೇಕಾದ ಲಸಿಕೆ, ಆರೋಗ್ಯ ಕ್ರಮಗಳ ಬಗ್ಗೆ ಕರೆ ಮಾಡಿ ಮಾಹಿತಿ ನೀಡುವ “ಕಿಲ್ಕಾರಿ ಎಂಬ ಉಚಿತ ಮೊಬೈಲ್” ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ.
ಜಿಲ್ಲೆಯಲ್ಲಿ ಅಂದಾಜು 29,000 ಗರ್ಭಿಣಿಯರು ಹಾಗೂ ಅಂದಾಜು 26,500 ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. ಪ್ರತಿ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ 29 ರಿಂದ 30 ಸಾವಿರ ಗರ್ಭಿಣಿಯರು ದಾಖಲಾಗುತ್ತಾರೆ. ಈ ವೇಳೆ ನಾನಾ ಕಾರಣಗಳಿಗೆ ತಾಯಿ ಮತ್ತು ನವಜಾತ ಶಿಶುಗಳ ಮರಣ ಸಂಭವಿಸುವ ಸಾಧ್ಯತೆಯಿರುತ್ತದೆ. ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕಿಲ್ಕಾರಿ ಎಂಬ ಉಚಿತ ಮೊಬೈಲ್ ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ.
ಈ ಮೂಲಕ ಗರ್ಭದಾರಣೆ, ಗರ್ಭಿಣಿ ತಾಯಿ ಮತ್ತು ಮಗುವಿನ ಆರೋಗ್ಯದ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಪೋನ್ಗೆ 01244451660 ಕಿಲ್ಕಾರಿ ಮೊಬೈಲ್ ಸಂಖ್ಯೆಯ ಮೂಲಕ ಮಾಹಿತಿಯನ್ನು ತಲುಪಿಸಲಾಗುತ್ತದೆ. ಈ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದಲ್ಲಿ 14423 ಸಂಖ್ಯೆಗೆ ಪುನ: ಕರೆ ಮಾಡುವ ಮೂಲಕ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿಯನ್ನು ಉಚಿತವಾಗಿ ಪಡೆಯಬಹುದು.
ಗರ್ಭಧಾರಣೆಯ 4ನೇ ತಿಂಗಳಿನಿಂದ ಮಗುವಿನ ಜನ್ಮದಿನದವರೆಗಿನ ಅವಧಿಯಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕರೆಗಳು ಬರುತ್ತವೆ. ಅಲ್ಲದೇ ಮಕ್ಕಳಿಗೆ 0-9 ತಿಂಗಳವರೆಗೆ ಹಾಕಿಸಬೇಕಾದ 12 ಲಸಿಕೆಗಳ ಬಗ್ಗೆ ಮಾಹಿತಿಯನ್ನು ಮುಂಚಿತವಾಗಿಯೇ ಕರೆಯ ಮೂಲಕ ತಿಳಿಸಲಾಗುತ್ತದೆ. ಮಾತ್ರವಲ್ಲದೇ ಯಾವುದೇ ಅನುಮಾನಗಳಿದ್ದಲ್ಲಿ ವೈದ್ಯರೊಂದಿಗೆ ಆಪ್ತ ಸಮಾಲೋಚನೆಗೂ ಅವಕಾಶ ನೀಡಲಾಗಿದೆ.
ಜಿಲ್ಲಾ ವ್ಯಾಪ್ತಿಯ ಸಾವಿರಾರು ಮಂದಿ ಗರ್ಭಿಣಿಯರು, ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ ಹಾಗೂ ತಾಯಿ ಮತ್ತು ಮಕ್ಕಳ ಮರಣವನ್ನು ತಡೆಗಟ್ಟಬಹುದಾಗಿದೆ. ಕೆಲವು ದಿನಗಳಿಂದ ಜಿಲ್ಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಸುಮಾರು 24,394 ಗರ್ಭಿಣಿಯರು, ತಮ್ಮ ಮೊಬೈಲ್ ಸಂಖ್ಯೆಯಡಿ ನೊಂದಣಿಯಾಗಿ ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.