ಮೈಸೂರು: ಪಿಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಕೊಡ ಮಾಡುವಂತ ಪಿಆರ್ ಟಿ ಕಲಾಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2025ನೇ ಸಾಲಿನ ಪಿಆರ್ ಟಿ ಕಲಾ ಪ್ರಶಸ್ತಿಗೆ ಹಿರಿಯ ಚಿತ್ರಕಲಾವಿಧೆ ಸುಧಾ ಮನೋಹರ್ ಹಾಗೂ ಮುಖವೀಣೆ ಆಂಜನಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪಿಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಅವರು ಮಾಹಿತಿ ಹಂಚಿಕೊಂಡಿದ್ದು,ಪಿ.ಆರ್.ತಿಪ್ಪೇಸ್ವಾಮಿ ಅವರು ಕರ್ನಾಟಕ ಕಂಡ ಅಪ್ರತಿಮ ಕಲಾವಿದರು. ನಾಡಿನ ಸಮಕಾಲೀನ ಚಿತ್ರಕಲಾ ಜಗತ್ತಿನ ಮೇರು ಶಿಖರಗಳಲ್ಲೊಬ್ಬರಾಗಿದ್ದವರು. ಕರ್ನಾಟಕ ಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಬದುಕಿನುದ್ದಕ್ಕೂ ದಣಿವರಿಯದೆ ದುಡಿದು, ನಮ್ಮಿಂದ ಮರೆಯಾದ ಹಿರಿಯಚೇತನ, ಹುಟ್ಟು ಕಲಾವಿದರಾದ ಅವರು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಚಿತ್ರಕಲೆ, ಸಾಹಿತ್ಯ, ಜಾನಪದ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಕಳೆದ 5-6 ದಶಕಗಳಲ್ಲಿ ಸಲ್ಲಿಸಿದ ಸೇವೆ ಅನನ್ಯವಾದುದು ಎಂದಿದ್ದಾರೆ.
ಇಂದಿನ ದಿನಮಾನದಲ್ಲಿ ಕಾಣದ ವಿರಳ ವ್ಯಕ್ತಿತ್ವ ಅವರದು. ಮೈಸೂರಿನ ಚಾಮರಾಜ ಚಿತ್ರಕಲಾ ಶಾಲೆಯಲ್ಲಿ ಕಲೆಯ ಅಭ್ಯಾಸ ಮಾಡಿ ನಿಸರ್ಗಚಿತ್ರ ರಚನೆಯಲ್ಲಿ ನಿಷ್ಣಾತರೆನಿಸಿ ಸಿದ್ಧಿಯ ಶಿಖರವೇರಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕಟ್ಟಿದ ಜಾನಪದ ವಸ್ತು ಸಂಗ್ರಹಾಲಯ ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು. ಶ್ರೀ ಕ್ಷೇತ್ರ ಸುತ್ತೂರು, ಚಿತ್ರದುರ್ಗದ ಬೃಹನ್ಮಠ, ಧರ್ಮಸ್ಥಳದ ‘ಮಂಜೂಷ’ ಮೊದಲಾದ ಮ್ಯೂಸಿಯಂಗಳ ಸ್ಥಾಪನೆಗಾಗಿ ಹಗಲಿರುಳು ದುಡಿದರು. ಇವರ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡ ಅನೇಕರು ‘ಮ್ಯೂಸಿಯಂಗಳ ಮಾಂತ್ರಿಕ’ ಹಾಗೂ ‘ಜಾನಪದ ಜಂಗಮ’ ರೆಂದೆ ಇವರನ್ನು ಕೊಂಡಾಡಿದ್ದಾರೆ. ಕಲಾ ಲೋಕದ ಕ್ರಿಯಾಶೀಲರಾದ ಇವರನ್ನು ಕರ್ನಾಟಕ ಸರ್ಕಾರ 1991-95ರ ಅವಧಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಿತು ಎಂದು ತಿಳಿಸಿದ್ದಾರೆ.
ಹಿರಿಯ ಕಲಾವಿದ ಶ್ರೀ ಪಿ.ಆರ್.ತಿಪ್ಪೇಸ್ವಾಮಿರವರ ನೆನಪಿನ ಅಂಗವಾಗಿ ಪ್ರತಿ ವರ್ಷದಂತೆ ಮೈಸೂರಿನಲ್ಲಿ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-2025 ಮತ್ತು ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಬಾರಿ ಬೆಂಗಳೂರಿನ ಹಿರಿಯ ಚಿತ್ರಕಲಾವಿದರಾದ ಸುಧಾಮನೋಹ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖವೀಣೆ ಅಂಜನಪ್ಪ ಇವರನ್ನು ಪಿಆರ್‌ಟಿ ಕಲಾಪತ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಚಿತ್ರಕಲೆ ಮತ್ತು ಜಾನಪದ ಕಲೆಗೆ ಪಿಆರ್‌ಟಿ ಕಲಾಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, ತಲಾ 25000/- ನಗದು, ಪ್ರಶಸ್ತಿಪತ್ರ ಪ್ರಶಸ್ತಿಫಲಕ, ಹಾಗೂ ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಸುಧಾಮನೋಹರ್‌ರವರು ಮೂಲತಃ ಧಾರಾವಾಡದವರು, ಬೆಂಗಳೂರಿನ ಪ್ರತಿಷ್ಠಿತ ಕಲಾಕಾಲೇಜಾದ ಚಿತ್ರಕಲಾ ಪರಿಷತ್‌ನಲ್ಲಿ ಹಾಗೂ ಸ್ವಿಜರ್ಲ್ಯಾಂಡ್‌ನಲ್ಲಿ ಕಲಾಶಿಕ್ಷಣ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕರ್ನಾಟಕದ ಕಲಾವಲಯದಲ್ಲಿ ಸಾಕಷ್ಟು ಸೇವೆಸಲ್ಲಿಸಿದ್ದು ಜೀವಮಾನದ ಕಲಾಶಿಕ್ಷಕಿ ಪ್ರಶಸ್ತಿ, ಮೈಸೂರು ದಸರಾ ಕಲಾಪ್ರಶಸ್ತಿ, ಆಲ್ ಇಂಡಿಯಾ ಆರ್ಟಿಸ್ಟ್ ಎಕ್ಸಿಬಿಷನ್‌ನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ಕಲಾಕೃತಿಗಳು ಸಂಗ್ರಹಗೊಂಡಿವೆ ಎಂದಿದ್ದಾರೆ.
ಮುಖವೀಣೆ ಅಂಜನಪ್ಪನವರು ಚಿಕ್ಕಬಳ್ಳಪುರದ ದಪ್ಪರ್ತಿ ಗ್ರಾಮದವರು ಜನಪದ ಕಲಾಪ್ರಕಾರದ ಮುಖವೀಣೆ ವಾದನವನ್ನು ಶಾಸ್ತ್ರೀಯವಾಗಿ ನುಡಿಸುವ ಮೂಲಕ ಜಾನಪದ ಹಿನ್ನಲೆಯ ವಾದ್ಯಕ್ಕೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟವರು, ರಂಗಗೀತೆ, ಬಯಲಾಟ, ಚಲನಚಿತ್ರ ಗೀತೆಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದು, ಏಕಕಾಲದಲ್ಲಿ ಐದು ವಾದನಗಳನ್ನು ನುಡಿಸಿ ನೋಡಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಜಾನಪದ ಅಕಾಡಮಿಯ ಕಲಾಪ್ರಶಸ್ತಿ, ಜನಪದ ಶ್ರೀ ಕಲಾಪ್ರಶಸ್ತಿ, ಲಭಿಸಿದೆ. ನೂರಾರು ಸಂಘ ಸಂಸ್ಥೆಗಳು ಆಹ್ವಾನಿಸಿ ಗೌರವಿಸಿವೆ. ಈ ಇಳಿ ವಯಸ್ಸಿನಲ್ಲಿಯು ಕಲೆಯನ್ನು ನಿರಂತರವಾಗಿ ಮೈಗೂಡಿಸಿಕೊಂಡಿದ್ದಾರೆ. ಮುಂದಿನ ತಿಂಗಳು ನೆಡೆಯುವ “ಪಿ.ಆರ್.ತಿಪ್ಪೇಸ್ವಾಮಿ ಕಲಾಸಂಭ್ರಮ-2025 ಮತ್ತು ಪಿಆರ್‌ಟಿ ಕಲಾ ಪ್ರಶಸ್ತಿ ಪ್ರದಾನ” ಕಾರ್ಯಕ್ರಮದಲ್ಲಿ ಇವರಿಬ್ಬರಿಗೂ ಪಿಆರ್‌ಟಿ ಕಲಾಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ವೇಳೆ ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್‌ನ ಕಾರ್ಯದರ್ಶಿ ಕೆ ಸಿ ಮಹದೇವಶೆಟ್ಟಿ ಹಾಗೂ ನಿರ್ದೇಶಕರಾದ ಹೆಚ್ ಆ ಚಂದ್ರಶೇಖರಯ್ಯ ಹಾಗೂ ಮೈಲಹಳ್ಳಿ ರೇವಣ್ಣ ಉಪಸ್ಥಿತರಿದ್ದರು.
ಶಿವಮೊಗ್ಗ: ಮಾ.14ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING : ಸೌಜನ್ಯ ಅತ್ಯಾಚಾರ, ಕೊಲೆ ಕೇಸ್ : ಯೂಟ್ಯೂಬರ್ ಸಮೀರ್ ವಿರುದ್ಧದ ‘FIR’ ಗೆ ಹೈಕೋರ್ಟ್ ತಡೆ