ನವದೆಹಲಿ: ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್ ಗೂಲಮ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಮತ್ತು ಕೀ ಆಫ್ ದಿ ಹಿಂದೂ ಮಹಾಸಾಗರವನ್ನು ನೀಡಿ ಗೌರವಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ದ್ವೀಪ ರಾಷ್ಟ್ರಕ್ಕೆ ಆಗಮಿಸಿದ್ದಾರೆ.ಮೋದಿ ಭಾಷಣ ಮಾಡಿದ ಸಮುದಾಯ ಕಾರ್ಯಕ್ರಮದಲ್ಲಿ ರಾಮ್ ಗೂಲಂ ಈ ಘೋಷಣೆ ಮಾಡಿದ್ದಾರೆ.
ಈ ಗೌರವಕ್ಕಾಗಿ ಮಾರಿಷಸ್ ಜನತೆಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು.”ಮಾರಿಷಸ್ ಜನರು ಮತ್ತು ಸರ್ಕಾರವು ನನಗೆ ತಮ್ಮ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಿದೆ. ನಾನು ಈ ನಿರ್ಧಾರವನ್ನು ಬಹಳ ಗೌರವದಿಂದ ಸ್ವೀಕರಿಸುತ್ತೇನೆ. ಇದು ನನಗೆ ಕೇವಲ ಗೌರವವಲ್ಲ, ಇದು ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಬಂಧಕ್ಕೆ ಸಂದ ಗೌರವವಾಗಿದೆ” ಎಂದು 3,500 ಕ್ಕೂ ಹೆಚ್ಚು ಜನರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಅವರು ಹೇಳಿದರು.
ಭಾರತ ಮತ್ತು ಮಾರಿಷಸ್ ನಡುವಿನ ಸಂಬಂಧವನ್ನು ಬಲಪಡಿಸಲು ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ.
ಮಾರಿಷಸ್ ಅಧ್ಯಕ್ಷ ಧರಂ ಗೋಖೂಲ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಮಹಾಕುಂಭಮೇಳದಿಂದ ಗಂಗಾಜಲ ಉಡುಗೊರೆ ನೀಡಿದರು.ಈ ಗೌರವಕ್ಕೆ ಪಾತ್ರರಾದ ಐದನೇ ವಿದೇಶಿ ಪ್ರಜೆ ಮೋದಿ ಎಂದು ರಾಮ್ ಗೂಲಂ ಹೇಳಿದರು.