ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ 12 ಮಾರಕ ರೋಗಗಳನ್ನು ತಡೆಯಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ವಯಸ್ಸಿಗನುಸಾರವಾಗಿ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣ ನವಜಾತ ಶಿಶುವಿಗೆ ಪೋಲಿಯೋ ರೋಗ ತಡೆಗೆ ಎರಡು ಪೋಲಿಯೊ ಹನಿ, ಬಾಲ ಕ್ಷಯ ತಡೆಯಲು ಬಿಸಿಜಿ ಚುಚ್ಚುಮದ್ದು, ಕಾಮಾಲೆ ತಡೆಯಲು ಹೆಪಟೈಟಿಸ್ ಬಿ ಹಾಗೂ ಆಂತರಿಕ ರಕ್ತಸ್ರಾವ ತಡೆಯಲು ವಿಟಮಿನ್-ಕೆ ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಅವರು ಕುರುಗೋಡು ತಾಲೂಕಿನ ಕೋಳೂಕು ಗ್ರಾಮದಲ್ಲಿ ನವಜಾತ ಶಿಶುಗಳ, ಗರ್ಭಿಣಿ, ಬಾಣಂತಿಯರ ಮನೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು. ಲಸಿಕೆ ಹಾಕಿಸದಿದ್ದಲ್ಲಿ ಶಿಶುಗಳಿಗೆ ಬಾಲ್ಯಾವಧಿಯಲ್ಲಿ ಬರುವ ಮಾರಕ ರೋಗಗಳು ಕಂಡುಬರುತ್ತವೆ. ಅವು ಗಂಭೀರ ಸ್ವರೂಪಕ್ಕೆ ತಿರುಗಿ ತೀವ್ರ ರೀತಿಯ ಆರೋಗ್ಯದ ಸಮಸ್ಯೆ ಉಂಟಾಗಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಮಗುವಿನ ಒಂದು ವರ್ಷ ವಯಸ್ಸಿನೊಳಗೆ 12 ಮಾರಕ ರೋಗಗಳ ವಿರುದ್ಧದ ಲಸಿಕೆಗಳನ್ನು ವಯಸ್ಸಿಗನುಸಾರವಾಗಿ ಹಾಕಿಸಬೇಕು ಎಂದರು.
ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಗ ತಡೆಗೆ ಲಸಿಕೆಗಳು, ಅತಿಸಾರ ಭೇದಿ ತಡೆಗೆ ರೋಟಾ ವೈರಸ್, ಶ್ವಾಸಕೋಶದ ಸೋಂಕು (ನ್ಯೂಮೋನಿಯಾ) ತಡಗೆ ಹೆಚ್ ಇನ್‌ಪ್ಲ್ಯುಯೆಂಜಾ, ಕಾಮಾಲೆ ತಡೆಗಾಗಿ ಹೆಪಟೈಟಿಸ್-ಬಿ ಒಳಗೊಂಡ ಪೆಂಟಾವೈಲೆAಟ್ ಲಸಿಕೆ ಹಾಗೂ ರಕ್ತದ ಸೋಂಕು ತಡೆಗೆ ನಿಮೋಕಾಕಲ್ ಲಸಿಕೆ, ಮೆದುಳು ಜ್ವರ ರೋಗ ತಡೆಗೆ ಜಾಪನೀಸ್ ಎನ್ಸ್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ, ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು. ಇವುಗಳನ್ನು ತಪ್ಪದೇ ಪ್ರತಿ ಅರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮ ವಾರ್ಡ್ಗಳಲ್ಲಿ ಪ್ರತಿ ಗುರುವಾರ ಹಾಕಿಸಬೇಕು ಎಂದು ಅವರು ಕೋರಿದರು.
ಕೆಲವು ರೋಗಗಳಿಗೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ ಮಗುವಿನ 16 ರಿಂದ 23 ತಿಂಗಳು ವಯಸ್ಸಿನ ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು. ಈ ಹಿನ್ನಲೆಯಲ್ಲಿ ಯಾವುದೇ ಗಾಳಿಸುದ್ದಿಗಳನ್ನು ನಂಬದೆ ಎಲ್ಲಾ ಲಸಿಕೆಗಳನ್ನು ಹಾಕಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಆರೋಗ್ಯ ನೀರಿಕ್ಷಣಾಧಿಕಾರಿ ಕೆ.ವೀರೇಶ, ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿ ಶರಣಮ್ಮ, ಸಿದ್ದಮ್ಮ, ಆಶಾ ಕಾರ್ಯಕರ್ತೆ ರಾಧಾ ಸೇರಿದಂತೆ ತಾಯಂದಿರು, ಸಾರ್ವಜನಿಕ ಉಪಸ್ಥಿತರಿದ್ದರು.