ಬೆಂಗಳೂರು: ವಿಶ್ವ ಮಹಿಳಾ ದಿನ ಅಂಗವಾಗಿ ಬನಶಂಕರಿಯ ಫಿಡಲಿಟಸ್ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯೋಗಿಗಳು ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನ ಆಚರಿಸಿದರು. ಬಣ್ಣದ ಬಣ್ಣದ ಉಡುಗೆ ಧರಿಸಿ ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿ ಮಹಿಳೆಯರು ಮುಂದಿರುವುದು ದೇಶದ ಆರ್ಥಿಕತೆ ಅಭಿವೃದ್ಧಿಗೆ ನಮ್ಮ ಕೊಡುಗೆ ಸಾಕಷ್ಟಿದೆ ಎಂದು ಘೋಷಿಸಿ ಸಂಭ್ರಮಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ಗೌಡ ಮಾತನಾಡಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯುಕ್ತಿಕವಾಗಿ ಮನೆಯ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಮತ್ತು ಪೈಲೆಟ್ ಆಗಿ ಕೂಡ ತನ್ನ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎಂದು ಮಹಿಳೆಯರ ಬಗ್ಗೆ ಗುಣಗಾನ ಮಾಡಿದರು.
ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡುವುದಾದರೆ ಇಂದು ಮಹಿಳೆಯರ ಸಾಧನೆ ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಐಟಿ-ಬಿಟಿ ಕ್ಷೇತ್ರಗಳಲ್ಲೂ ಮಹಿಳೆಯರು, ದೇಶಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಈಗಲೂ ಮಹಿಳೆಯರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಬುದ್ಧಿಶಕ್ತಿಯಿಂದ ಅದೆಷ್ಟೂ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟಿದ್ದಾರೆ. ಮಹಿಳೆಯರ ಸಾಧನೆಗೆ ಮನಃ ಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಗಳು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಡುವ ಮೂಲಕ ಮಹತ್ತರ ಬೆಳೆವಣಿಗೆ ದಾರಿದೀಪವಾಗಲಿ ಎಂದು ಆಶಿಸಿದರು.