ಮೌಡ್ಯತೆ, ಮೂಢನಂಬಿಕೆಗೆ ಒಳಗಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವುದು ಕಾನೂನು ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಭಾರತ ಸಂವಿಧಾನದಲ್ಲಿ ಪರಿಚ್ಛೇದ 21ರಲ್ಲಿ ದೇಶದ ಸಮಸ್ತರಿಗೂ ಬದುಕುವ ಹಕ್ಕನ್ನು ನೀಡಿದೆ ಪರಿಚ್ಛೇಧ 15(3)ರಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯವನ್ನು ಕಲ್ಪಿಸಲು ಅವಕಾಶವನ್ನು ನೀಡಿದೆ. ಪರಿಚ್ಛೇದ 39(ಎಫ್)ನಲ್ಲಿ ಆರೋಗ್ಯಯುತವಾಗಿ ಮಕ್ಕಳು ಅಭಿವೃದ್ಧಿಯನ್ನು ಹೊಂದಲು ಅವಕಾಶಗಳನ್ನು ಹಾಗೂ ಯಾವುದೇ ರೀತಿಯ ದೌರ್ಜನ್ಯಗಳಿಂದ ರಕ್ಷಣೆಯನ್ನು ನೀಡಿದೆ. ಭಾರತ ಸರಕಾರವು “ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ” 11 ಡಿಸೆಂಬರ್ 1992ರಲ್ಲಿ ಸಹಿ ಮಾಡಿದ್ದು, ದೇಶದ ಸಮಸ್ತ ಮಕ್ಕಳಿಗೆ ಸುರಕ್ಷತೆ. ಮಕ್ಕಳಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಕಾರ್ಯನಿರ್ವಹಿಸುವಂತೆ ಸೂಚಿಸುತ್ತದೆ. ಜಿಲ್ಲಾಡಳಿತವು ಮಕ್ಕಳಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಪ್ರಕರಣ ದಾಖಲು: ಜಿಲ್ಲೆಯ ಗ್ರಾಮವೊಂದರಲ್ಲಿ ಮಗುವಿನ ಆರೋಗ್ಯ ಸುಧಾರಣೆಗಾಗಿ ಎಂದು ತಾಯಿಯೊಬ್ಬಳು ಮಗುವಿಗೆ ಉದ್ದಿನ ಕಡ್ಡಿ (ಅಗರಬತ್ತಿ) ಯಿಂದ ಸುಟ್ಟಿರುವ ಮತ್ತು ಕಾಲಿಗೆ ಬೊಬ್ಬೆ ಬರುವ ಹಾಗೆ ಬಟ್ಟೆಯಿಂದ ಕಾವು ಕೊಟ್ಟಿದ್ದು, ಇದರಿಂದ ಮಗುವಿಗೆ ನಂಜಾಗಿ ಚಿಕಿತ್ಸೆಯು ಫಲಿಸದೇ ಆ ಮಗು ಮೃತಪಟ್ಟಿರುವ ಘಟನೆಯು ತಡವಾಗಿ ಶಿಶು ಮರಣ ಪರಿಶೋಧನಾ ಸಭೆಯಲ್ಲಿ ವರದಿಯಾಗಿದೆ. ಈ ಮಗುವಿನ ಸಾವಿಗೆ ಕಾರಣಳಾದ ತಾಯಿಯ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಢನಂಬಿಕೆಗೆ ಒಳಗಾಗಿ ಮೂಢನಂಬಿಕೆ ಮೌಡ್ಯಾಚರಣೆಗಳಿಂದ ಮಕ್ಕಳಿಗೆ ಬರೆ ಹಾಕುವುದು, ಲೋಹಗಳಿಂದ ಚುಚ್ಚುವುದು, ಸುಡುವುದು ಅಥವಾ ಇನ್ನಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಮಕ್ಕಳಿಗೆ ಯಾವುದೇ ರೀತಿಯಲ್ಲಿ ದೈಹಿಕ ಹಿಂಸೆ ನೀಡಿದರೆ, ಅಂತಹವರಿಗೆ ಕಾನೂನು ಮೂಲಕ ಶಿಕ್ಷಾರ್ಹ ಅಪರಾಧವಿದೆ ಎಂದು ಪ್ರಕಟಣೆ ತಿಳಿಸಿದೆ.