ಬೆಂಗಳೂರು : ಬೆಂಗಳೂರು ಸಿಸಿಬಿ ಪೊಲೀಸರು ಕುಖ್ಯಾತ ಜೂಜುಕೋರ ಎಂ. ಬಾಬು ಬಿನ್ (ಲೇಟ್) ಮುನಿಸ್ವಾಮಿ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡಿ ಬಂಧಿಸಿದ್ದಾರೆ.
ಬೆಂಗಳೂರು ನಗರ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು, ಬೆಂಗಳೂರು ನಗರದ ನಿವಾಸಿಯಾದ ಎಂ. ಬಾಬು ಬಿನ್ (ಲೇಟ್) ಮುನಿಸ್ವಾಮಿ, 48 ವರ್ಷ, ಈತನು ನಿರಂತರವಾಗಿ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂದರ್-ಬಾಹರ್ ಜೂಜಾಟಗಳನ್ನು ಸೇರಿದಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರ್ಭೀತಿಯಿಂದ ಭಾಗಿಯಾಗುತ್ತಿದ್ದನು. ಸಾಮಾನ್ಯ ಕಾನೂನು ಕ್ರಮಗಳಿಂದ ಈತನ ಸಮಾಜಘಾತುಕ ಕಾನೂನು ಬಾಹಿರ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.
ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿ, ಡಿಸಿಪಿ ಅಪರಾಧ ಹಾಗೂ ಅಪರ ಪೊಲೀಸ್ ಆಯುಕ್ತರು (ಅಪರಾಧಗಳು) ರವರು ಶಿಫಾರಸ್ಸು ಮಾಡಿದ್ದರು. ಅದರಂತೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಿನಾಂಕ:01.03.2025 ರಂದು ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಶಿವಮೊಗ್ಗದ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಬಂಧನ ಆದೇಶವನ್ನು ಸಿಸಿಬಿ ಅಧಿಕಾರಿಗಳು ಬಂಧಿತ ವ್ಯಕ್ತಿಗೆ ಜಾರಿಗೊಳಿಸಿ, ಶಿವಮೊಗ್ಗದ ಕಾರಾಗೃಹಕ್ಕೆ ಒಪ್ಪಿಸಿರುತ್ತಾರೆ.