ಬೆಂಗಳೂರು: ಎರಡು ಎಕರೆ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಇತರ ಇಬ್ಬರು ಅಧಿಕಾರಿಗಳ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿ ಗ್ರಾಮದಲ್ಲಿರುವ ಈ ಭೂಮಿಯನ್ನು ಮಾಜಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಮಾರುತಿರಾವ್ ಜಾಧವ್ ಖರೀದಿಸಿದ್ದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಸರ್ವೇಯರ್ ಡಿ.ಬಿ.ಗಂಗಯ್ಯ, ಭೂದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್ ಹಾಗೂ ಅರವಿಂದ್ ಜಾಧವ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ನಕಲಿ ಭೂ ದಾಖಲೆಗಳನ್ನು ಸೃಷ್ಟಿಸಿ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಬೆಂಗಳೂರಿನ ನಿವಾಸಿ ಎಸ್.ಭಾಸ್ಕರನ್ ಆರೋಪಿಸಿದ್ದಾರೆ.
ಭಾಸ್ಕರನ್ ಅವರು 2016ರ ಆಗಸ್ಟ್ ನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ನಂತರ ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ದೂರು, ಎಫ್ಐಆರ್ ಮತ್ತು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಮೂವರು ಅಧಿಕಾರಿಗಳು ಹೈಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.