ಬೆಂಗಳೂರ: “ಯಕ್ಷಗಾನ ನಮ್ಮ ಸಂಸ್ಕೃತಿ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಯಾವುದೇ ಸಮಸ್ಯೆ ಇಲ್ಲದೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ವಿಧಾನಸಭೆಯ ಗಮನ ಸೆಳೆವ ಚರ್ಚೆ ವೇಳೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಅವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಗೃಹ ಸಚಿವರ ಗಮನ ಸೆಳೆದರು. ಗೃಹ ಸಚಿವರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉತ್ತರ ನೀಡಿದರು.
“ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸುನೀಲ್ ಕುಮಾರ್ ಅವರು ಪ್ರಸ್ತಾಪಿಸಿದ್ದಾರೆ. ಯಕ್ಷಗಾನ ಮಾಡುವಾಗ ಯಾರೂ ಇಂದು ಅರ್ಜಿ ಹಾಕಿ ನಾಳೆ ಯಕ್ಷಗಾನ ಪ್ರದರ್ಶನ ಮಾಡುವುದಿಲ್ಲ. ಅದಕ್ಕೆ 15 ದಿನಗಳ ತಯಾರಿ ಇರುತ್ತದೆ. ಬಿಜೆಪಿ ಕಾಲದಲ್ಲೂ ಕೆಲವು ನಿಯಮಾವಳಿಗಳನ್ನು ರೂಪಿಸಲಾಗಿದೆ. ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಪಡೆಯಲು ಕಾಲಾವಕಾಶ ನೀಡಬೇಕು. ಯಕ್ಷಗಾನ ಬೆಳಗಿನ ಜಾವದವರೆಗೂ ನಡೆಯುವುದರಿಂದ ಮಧ್ಯರಾತ್ರಿಯೇ ನಿಲ್ಲಿಸಬೇಕು ಎಂದು ಯಾರೂ ಆಕ್ಷೇಪ ಮಾಡುವುದಿಲ್ಲ. ಈಗ ಆಗಿರುವ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಯಕ್ಷಗಾನ, ಬಯಲಾಟ ದೇಶದ ಆಸ್ತಿ. ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂಬುದು ನಮ್ಮ ಉದ್ದೇಶವಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ನಿಲ್ಲಿಸಲು ಆಗುವುದಿಲ್ಲ” ಎಂದು ಭರವಸೆ ನೀಡಿದರು.
ಗೈಡೆನ್ಸ್ ವ್ಯಾಲ್ಯೂ ಆಧಾರದ ಮೇಲೆ ಭೂಸ್ವಾಧೀನ ಪರಿಹಾರ:
ತರಿಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್ ಶ್ರೀನಿವಾಸ್ ಅವರು ಎತ್ತಿನ ಹೊಳೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಮ್ಮ ಕ್ಷೇತ್ರದ ಹಬ್ಬಿನಹೊಳೆ ಗ್ರಾಮದಲ್ಲಿ ಎಕರೆಗೆ ಕೇವಲ 4 ಲಕ್ಷ ಮಾತ್ರ ಪರಿಹಾರ ನೀಡಿ 40 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 2-3 ಎಕರೆ ಹೊಂದಿರುವ ರೈತರು ಇದರಿಂದ ಬೀದಿಪಾಲಾಗುತ್ತಿದ್ದಾರೆ. ಹೀಗಾಗಿ ಇವರ ರಕ್ಷಣೆಗೆ 8.92 ಕೋಟಿ ನೆರವು ನೀಡಿದರೆ ಈ ಗ್ರಾಮದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ತಪ್ಪಿಸಬಹುದು ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಭದ್ರ ಮೇಲ್ದಂಡೆ ಯೋಜನೆ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಜಮೀನಿಗೆ ಪರಿಹಾರ ನೀಡುವಾಗ ಯಾವ ರೀತಿ ನೀಡಬೇಕು ಎಂದು ನಿಯಮಗಳಿವೆ. ನಾವು ಆ ನಿಯಮಗಳ ಪ್ರಕಾರವೇ ಪರಿಹಾರ ನೀಡಬೇಕು. ಇನ್ನು 2024ರಲ್ಲಿ ನೀರು ಹರಿಸುವಾಗ ಆಗಿರುವ ಹಾನಿಯನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ ವರದಿ ಪಡೆದು ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.
“ನಾನು ಕೂಡ ಈ ಜಾಗಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಒಂದು ಸರ್ವೇ ಜಾಗದಲ್ಲಿ ಎಕರೆಗೆ 2 ಲಕ್ಷ ಇದ್ದರೆ ಪಕ್ಕದಲ್ಲಿರುವ ಸರ್ವೇ ಜಾಗದಲ್ಲಿ ಎಕರೆಗೆ 40 ಲಕ್ಷ ಇದೆ. ನಾವು ನಿಗದಿಯಾಗಿರುವ ಗೈಡೆನ್ಸ್ ವ್ಯಾಲು ಮೇಲೆ ಪರಿಹಾರ ತೀರ್ಮಾನ ಮಾಡಬೇಕಾಗಿರುತ್ತದೆಯೇ ಹೊರತು ಪಕ್ಕದ ಜಮೀನಿನ ಮೌಲ್ಯದ ಮೇಲಲ್ಲ. ಈ ವಿಚಾರವಾಗಿ ರೈತರ ಜತೆ ಚರ್ಚೆ ಮಾಡಲು ದಿನಾಂಕ ನಿಗದಿ ಮಾಡಿದ್ದು, ನಮ್ಮ ಕೈಲಾದ ಸಹಾಯ ಮಾಡುತ್ತೇವೆ” ಎಂದು ತಿಳಿಸಿದರು.
ಬೇಲೂರು ಕ್ಷೇತ್ರದಲ್ಲಿ ಸುಮಾರು 60 ಕಿ.ಮೀ ಉದ್ದ ಎತ್ತಿನಹೊಳೆ ಯೋಜನೆ ಸಾಗಲಿದೆ. ಈ ಯೋಜನೆಯಿಂದ ನಮ್ಮ ಭಾಗದಲ್ಲಿ 60 ಕಿ.ಮೀ ರಸ್ತೆ ಹಾಳಾಗಿದೆ. ಇದರಿಂದ ರೈತರು, ಶಾಲಾ ಮಕ್ಕಳು ಹಾಗೂ ಜನರಿಗೆ ಸಮಸ್ಯೆಯಾಗಿದ್ದು ಇದನ್ನು ಸರಿಪಡಿಸಿಕೊಡಬೇಕು ಎಂದು ಶಾಸಕ ಹೆಚ್.ಕೆ ಸುರೇಶ್ ಅವರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನಾವು ಮೊದಲು ನೀರನ್ನು ಹೊರತೆಗೆಯುವತ್ತ ಗಮನಹರಿಸಿದ್ದು, ಬೇರೆ ರಸ್ತೆಗಳಿಗೆ ಕಡಿವಾಣ ಹಾಕಿದ್ದೇವೆ. ನೀರಾವರಿ ಯೋಜನೆಗಳಿಗೆ ಮೊದಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಸದಸ್ಯರು ಗಮನ ಸೆಳೆದಿರುವ ವಿಚಾರವನ್ನು ಗಮನಹರಿಸಿ ಯಾವ ರೀತಿ ಸಹಾಯ ಮಾಡಬಹುದು ಎಂದು ಆಲೋಚಿಸುತ್ತೇವೆ” ಎಂದು ತಿಳಿಸಿದರು.
ಗ್ರಾಮೀಣ ಭಾಗದ ಮಕ್ಕಳ ರಕ್ಷಣೆಗೆ ಬದ್ಧ:
ಇನ್ನು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ವಿಧಾನಸಭೆಯ ಕಲಾಪದಲ್ಲಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅನುವಾದದಿಂದ ಆಗಿರುವ ಪ್ರಮಾದಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಸರ್ಕಾರದ ಪರವಾಗಿ ಉತ್ತರ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, “ನಾವು ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಅನುವಾದದಿಂದ ಆಗುತ್ತಿರುವ ಪ್ರಮಾದಗಳನ್ನು ಸರಿಪಡಿಸಲು ಆಲೋಚನೆ ಮಾಡಲಾಗುತ್ತಿದೆ. ಕನ್ನಡಿಗರು, ಗ್ರಾಮೀಣ ಪ್ರದೇಶದ ಮಕ್ಕಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ನಿಮ್ಮ ಹಾಗೂ ನಮ್ಮ ಕಾಳಜಿ ಒಂದೇ ಆಗಿದೆ” ಎಂದರು.
ರಾಯಚೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ