ಬೆಂಗಳೂರು : “ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಗಳನ್ನು ಪಾವತಿ ಮಾಡಲಾಗುವುದು. ಸಣ್ಣ, ಸಣ್ಣ ಬಿಲ್ ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಗುತ್ತಿಗೆದಾರರ ಬಿಲ್ ಬಾಕಿ ವಿಚಾರ ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಭೇಟಿ ಬಗ್ಗೆ ಕೇಳಿದಾಗ, “ಬಿಜೆಪಿ ಕಾಲದಲ್ಲಿ ಅವರು ನನ್ನ ಇಲಾಖೆಯೊಂದರಲ್ಲಿಯೇ ರೂ.1.20 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳಿಗೆ ಆದೇಶ ನೀಡಿ ಹೋಗಿದ್ದು ಕೆಲಸ ನಡೆಯುತ್ತಿದೆ. ಪ್ರಸ್ತುತ ರೂ.6 ಸಾವಿರ ಕೋಟಿಯಷ್ಟು ಮಾತ್ರ ಬಿಲ್ ನೀಡಲು ಅವಕಾಶವಿದೆ. ಕೇಂದ್ರದಿಂದ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ” ಎಂದರು.
ಖರ್ಗೆ ಅವರನ್ನು ಭೇಟಿ ಮಾಡದೆ ಬಿಜೆಪಿ ಕಚೇರಿಗೆ ಹೋಗಲೇ?
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರ ಕೇಳಿದಾಗ, “ನಾನು ಖರ್ಗೆ ಅವರನ್ನು ಭೇಟಿ ಮಾಡದೇ ಬಿಜೆಪಿ ಕಚೇರಿಗೆ ಭೇಟಿ ನೀಡಲೇ?. ಅವರು ರಾಷ್ಟ್ರದ ಅಧ್ಯಕ್ಷರು, ನಾನು ರಾಜ್ಯದ ಅಧ್ಯಕ್ಷ. ಅವರು ನಮ್ಮ ರಾಜ್ಯಕ್ಕೆ ಬಂದಾಗ ಹೋಗಿ ಭೇಟಿ ಮಾಡಿ ಗೌರವ ನೀಡುವುದು ನಮ್ಮ ಕೆಲಸ. ಪಕ್ಷದ ವಿಚಾರಗಳು, ನೂತನ ಕಾಂಗ್ರೆಸ್ ಕಚೇರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು, ಈ ತಿಂಗಳಿನಲ್ಲಿಯೇ ದಿನಾಂಕ ನೀಡಿ ಎಂದು ಮನವಿ ಮಾಡಲು ಹೋಗಿದ್ದೆ” ಎಂದರು.
ಸಂದರ್ಭ ಬೇರೆ ರೀತಿಯಿದ್ದು, ಯಾವುದೇ ಭೇಟಿಗೂ ನಾನಾ ಅರ್ಥಗಳು ಉಂಟಾಗುತ್ತವೆ ಎಂದು ಕೇಳಿದಾಗ, “ಯಾವ ರೀತಿ ಬೇಕಾದರೂ ಅರ್ಥ ಮಾಡಿಕೊಳ್ಳಲಿ, ಸಾವಿರ ಚರ್ಚೆ ಮಾಡಲಿ” ಎಂದು ಹೇಳಿದರು.
ಟೀಕೆ ಮಾಡಲಿ ಎಂದೇ ಹೇಳಿಕೆ ನೀಡಿದ್ದೇನೆ
ನಟ್ಟು- ಬೋಲ್ಟ್ ವಿಚಾರವಾಗಿ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಕೇಳಿದಾಗ, “ಟೀಕೆ ಮಾಡಲಿ ಎಂದು ನಾನು ಹೇಳಿಕೆ ನೀಡಿದ್ದು. ನಾನು ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ತೆಗೆದುಕೊಂಡವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರಿಗಾಗಿ ಮಾಡಿರುವುದು. ಚಿತ್ರರಂಗ ಬೆಳೆಯಲಿ ಎಂದು. ಅವರ ಕ್ಷೇತ್ರದ ಬಗ್ಗೆ ಅವರೇ ಪ್ರಚಾರ ಮಾಡಿಕೊಳ್ಳದೇ ಇದ್ದರೆ ನಾವು ಬೆಳಗ್ಗೆ ಸಂಜೆ ಪ್ರಚಾರ ಮಾಡಿಕೊಳ್ಳಲು ಆಗುತ್ತದೆಯೇ?” ಎಂದು ತಿರುಗೇಟು ನೀಡಿದರು.
ಶಾಸಕರ ಸಂಬಳ ಹೆಚ್ಚಳದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದರು.
ಸ್ಪೀಕರ್ ಖಾದರ್ ಅವರು ಇತಿಹಾಸ ಬರೆಯುತ್ತಿದ್ದಾರೆ
ವಿಧಾನಸೌಧ ನಡೆದು ಬಂದ ದಾರಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟನೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಇತಿಹಾಸ ಮರೆತವನು ಇತಿಹಾಸ ಸೃಷ್ಟಿ ಮಾಡಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ವಿಧಾನಸೌಧ ಮತ್ತು ಸುವರ್ಣಸೌಧಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಬಸವಣ್ಣನವರ ಕಾಲದ ಪ್ರಪಂಚದ ಮೊದಲ ಸಂಸತ್ತು ಅನುಭವ ಮಂಟಪದ ಚಿತ್ರವನ್ನು ಅನಾವರಣಗೊಳಿಸಿದರು.
ಮೈಸೂರು 150 ವರ್ಷಗಳ ಕಾಲದ ಹಿಂದೆ ನಡೆಯುತ್ತಿದ್ದ ವಿಧಾನಸಭೆ ಕಲಾಪದ ಚಿತ್ರದಿಂದ ಹಿಡಿದು, ನೆಹರು ಅವರು ವಿಧಾನಸೌಧಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಚಿತ್ರವನ್ನು ಕೂಡ ಪ್ರದರ್ಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೂ ಉಪಯೋಗವಾಗಬೇಕು, ಅವರಿಗೂ ಜ್ಞಾನೋದಯವಾಗಬೇಕು, ಇತಿಹಾಸದ ಪರಿಚಯವಾಗಬೇಕು. ಖಾದರ್ ಅವರು ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ” ಎಂದರು.
ಶಿವಮೊಗ್ಗ: ಮಾ.6ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut