ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಮಹತ್ವಾಕಾಂಕ್ಷೆಯ ಭಾಗ್ಯಲಕ್ಷ್ಮಿ ಯೋಜನೆ ಆರಂಭಗೊಂಡು 18 ವರ್ಷವಾಗಿದೆ. ಈ ಯೋಜನೆಯೆಡಿ ಆರಂಭಿಕ ವರ್ಷದಲ್ಲಿ ಹೆಸರು ನೋಂದಾಯಿಸಿದ ಫಲಾನುಭವಿಗಳ ಖಾತೆಗೆ ಮೆಚ್ಯೂರಿಟಿ ಹಣ ಜಮಾ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಭಾಗ್ಯಲಕ್ಷ್ಮೀ ಯೋಜನೆಯ 2006-07ನೇ ಸಾಲಿನ ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆಯಲು ಸೂಚಿಸಲಾಗಿದೆ.
ಯೋಜನೆಯಡಿ 2006-07ನೇ ಸಾಲಿನಲ್ಲಿ ಒಟ್ಟು 1,527 ಫಲಾನುಭವಿಗಳು ನೋಂದಣಿಯಾಗಿದ್ದು, ವಯಸ್ಸು 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. ಅರ್ಹ ಫಲಾನುಭವಿಗಳು ವಿವರಕ್ಕೆ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಎನ್.ಆರ್. ಕಾಲನಿಯ ಬೆಂಗಳೂರು ರಾಜ್ಯ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080- 2660 1917 ಸಂಪರ್ಕಿಸಬಹುದು.