ಬೇಲೂರು : ಹಾಸನ, ಕೊಡಗು ಜಿಲ್ಲೆಗಳಲ್ಲಿ ನಿವಾಸಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಸಾವು-ನೋವೂ ಹೆಚ್ಚುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಕಾಡಾನೆ ಕಾಟಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಪ್ರಯತ್ನಶೀಲವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೇಲೂರು ತಾಲೂಕು ಬಿಕ್ಕೋಡು ಬಳಿ ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ಅನಿಲ್ ಮನೆಗೆ ಭೇಟಿ ನೀಡಿ ಅವರ ತಾಯಿ ಪಾರ್ವತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮೊಂದಿಗಿದೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಹೆಚ್ಚಿನ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಅರಣ್ಯ ಸಚಿವನಾದ ಬಳಿಕ ತಾವು 5ನೇ ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಹಲವು ಯೋಜನೆ ರೂಪಿಸಲಾಗಿದೆ. ಆನೆಗಳ ಚಲನವಲನದ ಬಗ್ಗೆ ನಿಗಾ ಇಡಲು ಹಾಸನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಕಳೆದ 2 ವರ್ಷದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು 31.6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪುಂಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಮತ್ತು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯವನ್ನೂ ಮಾಡಲಾಗಿದೆ ಎಂದು ವಿವರಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ. ಇದಕ್ಕೆ ರಾಜಕೀಯ ಲೇಪ ಹಚ್ಚದೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಈಶ್ವರ ಖಂಡ್ರೆ, ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಮೂರು ಜನರು ಆನೆ ದಾಳಿಗೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ಕೊಡಗು ಚಿಕ್ಕಮಗಳೂರು, ಮತ್ತು ಹಾಸನ (ಬೇಲೂರು, ಆಲೂರು) ವಲಯದಲ್ಲಿ ಕಾಡನ್ನೇ ನೋಡದ ನೂರಾರು ಆನೆಗಳಿವೆ. ಇಂತಹ ಆನೆಗಳನ್ನು ಭದ್ರಾ ಅಭಯಾರಣ್ಯದಲ್ಲಿ ನಿರ್ಮಿಸಲುದ್ದೇಶಿಸಿರುವ ಆನೆ ಧಾಮಕ್ಕೆ ಸೇರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಇದಕ್ಕಾಗಿ 100 ಕೋಟಿ ರೂಪಾಯಿ ಅಗತ್ಯವಿದ್ದು, ಬಜೆಟ್ ನಲ್ಲಿ ಇದಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಬೇಲೂರು ಮತ್ತು ಸಕಲೇಶಪುರದಲ್ಲಿ ಆನೆ ಕಾರ್ಯಪಡೆಯ ಕಚೇರಿ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಾರ್ಯಪಡೆಗೆ ಅಗತ್ಯವಾದ ಸಲಕರಣೆ, ವಾಹನ ಇತ್ಯಾದಿ ಒದಗಿಸಲಾಗುವುದು ಮತ್ತು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದೂ ತಿಳಿಸಿದರು.
ಶೀಘ್ರವೇ ನಾಲ್ಕು ಆನೆ ಸೆರೆ:
ಬೇಲೂರು ವಲಯದಲ್ಲಿ ಜನರ ಸಾವಿಗೆ ಕಾರಣವಾಗುತ್ತಿರುವ ನಾಲ್ಕು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸಿದ್ದು, ಈ ಆನೆಗಳನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿದೆ. ಆನೆ ಕಾರ್ಯಾಚರಣೆ ಸುಲಭದ ಕಾರ್ಯವಲ್ಲ. ಇದರಲ್ಲಿ ಹೆಚ್ಚಿನ ಅಪಾಯವಿದೆ. ಆನೆ ಸೆರೆಗೆ ತರಬೇತಾದ ಕುಮ್ಕಿ ಆನೆಗಳು ಬೇಕಾಗುತ್ತವೆ. ಪಶುವೈದ್ಯರು, ಶಾರ್ಪ್ ಶೂಟರ್ ಇರಬೇಕಾಗುತ್ತದೆ. ಇಂತಹ ಪುಂಡಾನೆ ಕಾರ್ಯಾಚರಣೆ ವೇಳೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ಹುತಾತ್ಮನಾಗಿದ್ದು ನಿಮಗೆ ತಿಳಿದಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕರುಗಳಾದ ರಾಜೇಗೌಡ, ಎಚ್.ಕೆ. ಸುರೇಶ್, ಮಾಜಿ ಸಚಿವ ಬಿ. ಶಿವರಾಂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಮತ್ತಿತರರು ಉಪಸ್ಥಿತರಿದ್ದರು.
2024-25ನೇ ಸಾಲಿನ ‘ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ’ ಫಲಿತಾಂಶ ಪ್ರಕಟ