ಬೆಂಗಳೂರು : ಹಳೆಯ ಪಿಂಚಣಿ ಯೋಜನೆ ಜಾರಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಒಪಿಎಸ್ ಮರು ಜಾರಿ ಸಾಧಕ-ಬಾಧಕಗಳ ಅಧ್ಯಯನಕ್ಕೆ ರಚನೆಯಾಗಿರುವ ಸಮಿತಿ 15 ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.
ಹೌದು, ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಪಟ್ಟು ಹಿಡಿದಿರುವ ಸರ್ಕಾರಿ ನೌಕರರ ಹೋರಾಟಕ್ಕೆ ಜಯ ಸಿಗುವ ಸಾಧ್ಯತೆ ಇದ್ದು, ಒಪಿಎಸ್ ಮರು ಜಾರಿ ಸಾಧಕ-ಬಾಧಕಗಳ ಅಧ್ಯಯನಕ್ಕೆ ರಚನೆಯಾಗಿರುವ ಸಮಿತಿ 15 ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಒಪಿಎಸ್ ಜಾರಿಗೊಳಿಸುವ ನಿಟ್ಟಿನಲ್ಲಿ ವರದಿಯಲ್ಲಿ ಪೂರಕ ಅಂಶ ಉಲ್ಲೇಖಿಸಿ, ಶಿಫಾರಸು ಮಾಡುವ ಮಾಹಿತಿ ಲಭಿಸಿದೆ.
2006ರ ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆ ನಂತರ ನೇಮಕಗೊಂಡಿರುವ 13500 ನೌಕರರನ್ನು ಎನ್‌ಪಿಎಸ್‌ನಿಂದ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು 2006ಕ್ಕಿಂತ ಮುಂಚೆ ನೇಮಕಗೊಂಡಿರುವ 2.45 ಲಕ್ಷ ನೌಕರರು ರಾಜ್ಯದಲ್ಲಿದ್ದು, ಅವರೆಲ್ಲರನ್ನೂ ಎನ್‌ಪಿಎಸ್‌ನಿಂದ ಹಳೇ ಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಇದೇ ಕಾರಣಕ್ಕೆ ಒಪಿಎಸ್ ಜಾರಿ ಬಗ್ಗೆ ಪರಿಶೀಲಿಸಿ ವರದಿ ಕೊಡಲು ಅಪರ ಮುಖ್ಯಕಾರ್ಯದರ್ಶಿ ಅಂಜುಮ್ ಪರ್ವೇಜ್ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚನೆ ಮಾಡಿದೆ. ಸಮಿತಿ ರಾಜ್ಯಗಳಲ್ಲಿ ಅಧ್ಯಯನ ಕಾರ್ಯ ಮುಕ್ತಾಯಗೊಳಿಸಿದ್ದು, ಶೀಘ್ರವೇ ವರದಿ ಸಲ್ಲಿಸುವ ಸಾಧ್ಯತೆ ಇದೆ.
ಅಂಜುಮ್ ಪರ್ವೇಜ್ ಸಮಿತಿ ಒಪಿಎಸ್ ಜಾರಿಗೊಳಿಸಲು ಶಿಫಾರಸು ಮಾಡುವ ಭರವಸೆ ಕೊಟ್ಟಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಒಪಿಎಸ್ ಮರು ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಒಪಿಎಸ್ ಜಾರಿಯಾಗುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.