ಬೆಂಗಳೂರು: ರಾಜ್ಯ ಸರ್ಕಾರದಿಂದ ಆರ್ಥಿಕ ಹೊರೆ ತಗ್ಗಿಸೋ ಸಂಬಂಧ ಮತ್ತೊಂದು ಸುತ್ತಿನಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ( BPL Ration Card ) ರದ್ದುಪಡಿಸೋದಕ್ಕೆ ಮುಂದಾಗಿದೆ. ಪಂಚಾಯ್ತಿ ಮಟ್ಟದಲ್ಲೇ ಅನರ್ಹರ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ಆರಂಭಗೊಳ್ಳಲಿದೆ. ಶೀಘ್ರವೇ ಈ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಹಲವು ಅನರ್ಹರ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎನ್ನಲಾಗುತ್ತಿದೆ.
ರಾಜ್ಯದ ಅನೇಕ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಮೇಲಿದ್ದವರೂ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆಯಾಗಿರೋದೇ ಸರ್ಕಾರಕ್ಕೆ ಮತ್ತೊಂದು ತಲೆ ಬಿಸಿಯಾಗಿದೆ.
ರಾಜ್ಯದ ಯಾವ ಜಿಲ್ಲೆಯಲ್ಲಿ ಬಡತನ ಪ್ರಮಾಣ ಶೇ.1ರಿಂದ 5ರಷ್ಟು ಇದೆಯೋ ಅಲ್ಲೇ ಶೇ.80ಕ್ಕಿಂತ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆಯಾಗಿರೋದಾಗಿ ತಿಳಿದು ಬಂದಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಕೂಡ ಹೆಚ್ಚಾಗಿದ್ದು, ದೊಡ್ಡ ಆರ್ಥಿಕ ಹೊಡೆತವೇ ಬಿದ್ದಿದೆ.
ಈ ಕಾರಣದಿಂದಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆಯಿಂದ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಪರಿಶೀಲನೆ ನೆಪದಲ್ಲಿ ಪಂಚಾಯ್ತಿ ಮಟ್ಟದಲ್ಲೇ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನವನ್ನು ನಡೆಸಲಾಗುತ್ತಿರುವುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.