ಬೆಂಗಳೂರು : ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ಮತ್ತು ಶ್ರಮಿಕರಿಗೆ ಮನ್ನಣೆಕೊಟ್ಟಿದ್ದು ಶರಣ ಪರಂಪರೆ, ಅನ್ನ, ಅರಿವು, ಆಶ್ರಯ ನೀಡಿ ಶಿಕ್ಷಣ ವಂಚಿತರಿಗೆ ನ್ಯಾಯಕೊಟ್ಟಿದ್ದು ನಮ್ಮ ವೀರಶೈವ, ಲಿಂಗಾಯತ ಮಠ ಮಾನ್ಯಗಳು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ವೀರಶೈವ, ಲಿಂಗಾಯತ ಮಹಾಸಭಾದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಘಟಕದ ಸೇವಾದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವರಿಗೂ ಲೇಸನ್ನೇ ಬಯಸುವ ಏಕೈಕ ಸಮುದಾಯ ನಮ್ಮ ಸಮಾಜವಾಗಿದ್ದು, ಇಂದು ನಾವೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ ಎಂದರು.
ಓಬಿಸಿ ಮೀಸಲಿಗೆ ಆಗ್ರಹ:
ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಲಿಂಗಾಯತ, ವೀರಶೈವ ಸಮಾಜದ ಎಲ್ಲ ಉಪ ಪಂಗಡಗಳನ್ನೂ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಿ ಅವರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕು ಎಂಬುದು ನಮ್ಮ ಮಹಾಸಭಾದ ನ್ಯಾಯೋಚಿತ ಬೇಡಿಕೆಯಾಗಿದ್ದು, ಸ್ವಾಭಾವಿಕ ನ್ಯಾಯದ ನೆಲೆಗಟ್ಟಿನಲ್ಲಿ ಈ ಬೇಡಿಕೆಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಅದೇ ರೀತಿ ಕರ್ನಾಟಕ ವೀರಶೈವ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಚೈತನ್ಯ ನೀಡಬೇಕು. ಆ ಮೂಲಕ ಸಮುದಾಯಕ್ಕೆ ಪ್ರಯೋಜನವಾಗಬೇಕು ಎಂಬುದು ಸಭಾದ ಆಶಯವಾಗಿದ್ದು, ಈ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಮ್ಮ ಸಮಾಜದ ಮುಂದೆ ಇಂದು ಅನೇಕ ಸವಾಲುಗಳಿವೆ. ನಮ್ಮ ಸಮಾಜದ ಉತ್ಥಾನಕ್ಕೆ ನಮ್ಮ ಸಮಾಜದ ಪ್ರಗತಿಗೆ, ನಾವೆಲ್ಲರೂ ಶ್ರಮಿಸಬೇಕು. ನಮ್ಮ ಸಮಾಜಕ್ಕೆ ಎಲ್ಲ ರಂಗದಲ್ಲೂ ಉನ್ನತ ಸ್ಥಾನ ದೊರಕಬೇಕು. ಸಮಾಜದ ಎಲ್ಲರೂ ಗೌರವಯುತವಾಗಿ ಬಾಳಬೇಕು. ಎಲ್ಲರೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂಬುದು ಮಹಾಸಭಾದ ಆಶಯವಾಗಿದೆ ಎಂದರು.
ಸಭಾದಿಂದ ಖಾಸಗಿಯಾಗಿ ಜಾತಿ ಜನಗಣತಿ:
ಜಾತಿ ಗಣತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ವರದಿ ಮಂಡನೆ ಆದ ಬಳಿಕ ನೈಜ ಸಂಗತಿ ತಿಳಿಯುತ್ತದೆ. ನಮ್ಮ ಸರ್ಕಾರ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಕ್ರಮ ವಹಿಸುತ್ತದೆ ಎಂಬ ವಿಶ್ವಾಸ ತಮಗಿದೆ ಎಂದರು.
ವೀರಶೈವ, ಲಿಂಗಾಯತರ ಸಂಖ್ಯೆ ಕಡಿಮೆ ಆಗಿರುವುದಕ್ಕೆ ನಮ್ಮ ಸಮಾಜದ ಜನರು ನೀಡಿರುವ ತಪ್ಪು ಮಾಹಿತಿಯೇ ಕಾರಣವಾಗಿದೆ. ಅನೇಕರು ಮೀಸಲಾತಿ ಸೌಲಭ್ಯ ಲಭಿಸುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಉಪ ಪಂಗಡಗಳ ಹೆಸರನ್ನಷ್ಟೇ ಬರೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿರುವ ವೀರಶೈವ ಲಿಂಗಾಯತರ ನೈಜ ಜನಸಂಖ್ಯೆ ತಿಳಿಯಲು ವೀರಶೈವ ಲಿಂಗಾಯತ ಮಹಾ ಸಭಾದ ವತಿಯಿಂದಲೇ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಖಾಸಗಿಯಾಗಿ ಜನಗಣತಿ ಮಾಡಿಸಿ ಸತ್ಯಾಂಶ ತಿಳಿಯಲು ತೀರ್ಮಾನಿಸಲಾಗಿದೆ ಎಂದರು.
ಇಲ್ಲಿದೆ ‘ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ ಬಗ್ಗೆ ಮಹತ್ವದ ಮಾಹಿತಿ