ಬಳ್ಳಾರಿ: ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಈ ಕಾಂಗ್ರೆಸ್ ಪಕ್ಷದ ಜಾಯಮಾನ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ಸಿದ್ದರಾಮಯ್ಯನವರು ಜನತಾದಳದಿಂದ ಬಂದು ಆ ವೃತ್ತಿಯನ್ನು ಇಲ್ಲಿ ಕಲಿತಿದ್ದಾರೆ ಎಂದು ಟೀಕಿಸಿದ್ದಾರೆ.
ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯ ಸುಮಾರು ರೂ. 25,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದಲಿತರ ಹಣವನ್ನು ಸರಕಾರ ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡಿದ ವಿಚಾರವನ್ನು ಮನೆಮನೆಗೆ ತಲುಪಿಸಲು ಅವರು ಮನವಿ ಮಾಡಿದರು.
ಮೊದಲ ವರ್ಷ 34 ಸಾವಿರ ಕೋಟಿ ದಲಿತರಿಗೆ ಮೀಸಲಿಟ್ಟಿದ್ದಾಗಿ ಮುಖ್ಯಮಂತ್ರಿಗಳು ಭಾಷಣ ಮಾಡಿದ್ದರು. ಇದು ಸುಳ್ಳು; ಹೇಳಿದ್ದು ಮಾತ್ರ. ಅದರಲ್ಲಿ 11,144 ಕೋಟಿ ಮೊತ್ತವನ್ನು ಗ್ಯಾರಂಟಿಗೆ ಕೊಟ್ಟಿದ್ದಾರೆ. ಎರಡನೇ ವರ್ಷದಲ್ಲಿ ಇಲ್ಲಿಂದ 14,366 ಕೋಟಿಯನ್ನು ಗ್ಯಾರಂಟಿಗಳಿಗೆ ಕೊಟ್ಟರು ಎಂದು ದೂರಿದರು.
ದಲಿತರ ಹಣವನ್ನು ಈ ಸರಕಾರ ದುರುಪಯೋಗ ಮಾಡುತ್ತಿದೆ ಎಂಬ ವಿಚಾರವನ್ನು ತಿಳಿಸಲು ಮಾನ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 14 ತಂಡಗಳನ್ನು ರಚಿಸಿದ್ದಾರೆ. 28 ಸಂಸದೀಯ ಕ್ಷೇತ್ರಗಳಿದ್ದು, ಒಂದೊಂದು ತಂಡವು 2 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದೆ ಎಂದು ವಿವರ ನೀಡಿದರು. ನಮ್ಮ ತಂಡವು ಬಳ್ಳಾರಿ- ಕೊಪ್ಪಳ ಕ್ಷೇತ್ರಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ ಎಂದರು.
ಕಾಂಗ್ರೆಸ್ ಸರಕಾರವು ದಲಿತರ ಅಭ್ಯುದಯಕ್ಕಾಗಿ ಇರುವ ಎಸ್‍ಸಿಎಸ್‍ಪಿ, ಟಿಎಸ್‍ಪಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆಗಿದೆ. ಅದಕ್ಕೆ ಇವತ್ತು ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಜಿಲ್ಲಾಧ್ಯಕ್ಷರು ಸೇರಿ ಎಲ್ಲರೂ ಬಂದಿದ್ದಾರೆ ಎಂದರು.
ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಸೃಷ್ಟಿ ಸೇರಿದಂತೆ ಶೇ 60 ರಷ್ಟು ಮೊತ್ತವನ್ನು ಅಸೆಟ್ ಕ್ರಿಯೇಷನ್‍ಗೆ ಬಳಸಬೇಕಿತ್ತು. ಭೂರಹಿತರಿಗೆ ಭೂಮಿ ಕೊಡಬೇಕಿತ್ತು. ಭೂಮಿ ಇದ್ದವರಿಗೆ ಕೊಳವೆಬಾವಿ ಹಾಕಿಸಿ ಕೊಡಬೇಕಿತ್ತು ಎಂದರು.
ಯಾರೇ ಎಸ್‍ಸಿ, ಎಸ್‍ಟಿಗಳಿಗೆ ಅನ್ಯಾಯ ಆದರೂ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಅನ್ಯಾಯ ಆದರೆ, ಯಾರಿಗೇ ಅನ್ಯಾಯ ಆದರೂ ನಮ್ಮ ಪಕ್ಷ ಹೋರಾಟ ಮಾಡುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರವು ಗ್ಯಾರಂಟಿ ವಿಚಾರದಲ್ಲಿ ಮೂರು ನಾಮ ಹಾಕಿದೆ ಎಂದು ಜನರೇ ಈಗ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇಂಥ ಗ್ಯಾರಂಟಿಗಳನ್ನು ಕೊಟ್ಟು ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಗೆದ್ದಿದ್ದರು ಎಂದು ಆಕ್ಷೇಪಿಸಿದರು.
ವಾಲ್ಮೀಕಿ ನಿಗಮದ 87 ಕೋಟಿ ಹಣದ ಅವ್ಯವಹಾರವನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಆದರೆ, ಸರಕಾರದ ಎಸ್‍ಐಟಿ ಈ ವಿಚಾರದಲ್ಲಿ ಆರೋಪಿಗಳ ಹೆಸರನ್ನು ಬಿಟ್ಟು ಕ್ಲೀನ್ ಚಿಟ್ ಕೊಟ್ಟಿದೆ ಎಂದು ಟೀಕಿಸಿದರು. ಈ ನಿಗಮದ ದುಡ್ಡು ಹೊಡೆದವರು ಜಮೀನು ಖರೀದಿಸಿದ್ದಲ್ಲದೇ ಲ್ಯಾಂಬೊರ್ಗಿನಿ ಕಾರು ಖರೀದಿಸಿ ದಲಿತರಿಗೆ ಮೋಸ ಮಾಡಿದ್ದಾರೆ ಎಂದು ಖಂಡಿಸಿದರು. ಕದ್ದ ಮಾಲು ವಾಪಸ್ ಕೊಟ್ಟರೆ ಅವರ ಮೇಲೆ ಕೇಸಿಲ್ಲ ಎಂಬ ನೀತಿ ಇವರದು ಎಂದು ಟೀಕಿಸಿದರು.
ಬದ್ಧತೆ, ಶಿಸ್ತಿನಿಂದ ಕಲಿತರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾರಂತೆ ಸಾಧನೆ ಮಾಡಬಹುದು: ಮಕ್ಕಳಿಗೆ DKS ಕಿವಿಮಾತು
BREAKING: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ: ಐವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ