ಮೈಸೂರು: ಮೈಸೂರಿನ ಉದಯಗಿರಿ ಗಲಭೆಯ ಗಲಭೆಕೋರರು ಯಾರೇ ಆಗಿದ್ದರೂ ಅವರನ್ನು ನಿರ್ದಯವಾಗಿ ಶಿಕ್ಷೆಗೆ ಗುರಿ ಮಾಡಬೇಕು. ಪೊಲೀಸ್ ವಾಹನಗಳ ಮೇಲೆ ಕಲ್ಲು ಹೊಡೆಯುತ್ತಾರೆ ಎಂದರೆ ನಮ್ಮ ರಾಜ್ಯದ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಗಮನಿಸಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಕರ್ನಾಟಕ ಕುವೆಂಪು ಅವರ ಸಂದೇಶದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಉಳಿಯಬೇಕು. ಬಿಜೆಪಿ ಸ್ನೇಹಿತರಿಗೆ ನಾನು ಮನವಿ ಮಾಡಿಕೊಳ್ತೀನಿ. ನಮ್ಮ ಸಮಾಜಕ್ಕೆ ರಕ್ಷಣೆ ನೀಡಬೇಕೆಂದು ನೀವು ಹೋಗುತ್ತೀರಿ. ನಿಮ್ಮ ಒಳ್ಳೆಯ ಉದ್ದೇಶವನ್ನು ದುರುಪಯೋಗ ಮಾಡಿಕೊಂಡು ಅವರು ಭದ್ರವಾಗುತ್ತಾ ಹೋಗುತ್ತಿದ್ದಾರೆ. ಎರಡೂ ಪಕ್ಷದ ನಾಯಕರಿಗೆ ನಾನು ಮನವಿ ಮಾಡಿಕೊಳ್ಳುವೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಿ. ಶಾಂತಿ, ನೆಮ್ಮದಿ ಹಾಳು ಮಾಡುವ ಇಂಥ ಗಲಭೆಕೋರ ಶಕ್ತಿಗಳನ್ನು ಮಟ್ಟ ಹಾಕಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇಂತಹವರನ್ನು ಸಹಿಸಿಕೊಳ್ತೀರಿ. ಯಾರನ್ನೋ ಓಲೈಸಲು ಸರ್ಕಾರ ಇರುವುದಲ್ಲ. ಎಲ್ಲರ ಸರ್ಕಾರ ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ಕಾನೂನು ಬಾಹಿರ ಚಟುವಟಿಕೆ ನಡೆಸುವವನು ಯಾರೇ ಇರಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಮೂಟೆಗಟ್ಟಲೆ ಕಲ್ಲು ತಂದು ಹೊಡೆದವರನ್ನು ರಕ್ಷಣೆ ಮಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಕೊಡಗು ಕ್ಷೇತ್ರದ ಲೋಕಸಭೆ ಸದಸ್ಯರಾದ ಯದುವೀರ ಚಾಮರಾಜ ಒಡೆಯರ್, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಹೇಶ್ ಸೇರಿದಂತೆ ಅನೇಕ ಗಣ್ಯರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಾರತದಲ್ಲಿ 2024ರಲ್ಲಿ 84 ಬಾರಿ ಇಂಟರ್ನೆಟ್ ಸ್ಥಗಿತ: ವಿಶ್ವದಲ್ಲೇ 2ನೇ ಸ್ಥಾನ | Internet shutdown
ಸಿಎಂ ಅನುಕೂಲಕ್ಕೆ ತಕ್ಕಂತೆ ಲೋಕಾಯುಕ್ತ ವರದಿ: ಹೆಚ್.ಡಿ. ಕುಮಾರಸ್ವಾಮಿ ಟೀಕೆ