ಬೆಂಗಳೂರು: ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಮುಖಂಡರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕೆಳಕಂಡಂತೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ್ ಬೊಮ್ಮಾಯಿಯವರು ಹಾಗೂ ಇತರೆ ವಿರೋಧ ಪಕ್ಷದ ಮುಖಂಡರುಗಳು ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ, ರಾಜ್ಯ ದಿವಾಳಿಯಾಗುತ್ತಿದೆ. ಹಣಕಾಸಿನ ವ್ಯವಸ್ಥೆ ನೆಲ ಕಚ್ಚಿದೆ ಎಂದೆಲ್ಲ ಆರೋಪಿಸಿ ಮಾತನಾಡಿದ್ದಾರೆ. ಆ ಮೂಲಕ ಜನರನ್ನು ಸಶಕ್ತಗೊಳಿಸುತ್ತಿರುವ ನಮ್ಮ ಗ್ಯಾರಂಟಿ ಹಾಗೂ ಇನ್ನಿತರೆ ಯೋಜನೆಗಳನ್ನು ಟೀಕಿಸಿದ್ದಾರೆ.
ವಾಸ್ತವವೇನೆಂದರೆ, ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾಗ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದರು. ಆದರೆ ವಿರೋಧ ಪಕ್ಷದಲ್ಲಿ ಕೂತು ದೊಡ್ಡ ಅರ್ಥಶಾಸ್ತ್ರಜ್ಞರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಅರಾಜಕ ಆರ್ಥಿಕ ನಿರ್ವಹಣೆಗಳಿಂದಾಗಿ ಪಾತಾಳದತ್ತ ಕುಸಿಯುತ್ತಿದ್ದ ರಾಜ್ಯದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದೆ ಅಥವಾ ಅರಿತುಕೊಳ್ಳಲಾರದೆ ಬಿಜೆಪಿಯವರು ಮಾತಾಡುತ್ತಿರುವುದು ದುರಂತವೆಂದು ಸರ್ಕಾರವು ಭಾವಿಸುತ್ತದೆ.
ಬಿಜೆಪಿಯವರು ಮಾಡಿದ್ದ ಅವಾಂತರಗಳ ಕೆಲವು ಉದಾಹರಣೆಗಳಿವು;
- ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದ್ದಾಗ ಬಜೆಟ್‌ಗಳಲ್ಲಿ ನಿಗಧಿ ಮಾಡಿದ್ದಕ್ಕಿಂತ ಏಳು ಪಟ್ಟು ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಂಡಿದ್ದರು. 31-3-2023 ಕ್ಕೆ ಬಂಡವಾಳ ವೆಚ್ಚ ಮಾಡುವ ಪ್ರಮುಖ ಇಲಾಖೆಗಳಾದ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 2,70,695 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಕಾಮಗಾರಿಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಅನುದಾನ ಒದಗಿಸದೆ ಬಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಕೆಳಗೆ 1,66,426 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಈ ಆರ್ಥಿಕ ದುರಾಡಳಿತ, ಬೇಜವಾಬ್ದಾರಿತನ, ಭ್ರಷ್ಟಾಚಾರಯುತ ಕಾಮಗಾರಿಗಳ ನಿರ್ವಹಣೆಯನ್ನು ಕೇವಲ ಒಂದೆರಡು ವರ್ಷಗಳಲ್ಲಿ ದುರಸ್ತಿ ಮಾಡಲು ಸಾಧ್ಯವೆ?
- ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಮ್ಮ ರಾಜ್ಯದ ಸಂಪನ್ಮೂಲಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿದ್ದರೂ ರಾಜ್ಯ ಬಿಜೆಪಿಯವರು ಕೈ ಕಟ್ಟಿ ಬಾಯಿ ಮುಚ್ಚಿ ಕೂತಿದ್ದರು. ಇದು ಜೀವಂತ ಕುರಿಯ ಚರ್ಮ ಸುಲಿಯುತ್ತಿದ್ದರೂ ಕಣ್ಣ ಮುಂದಿನ ಗರಿಕೆ ಹುಲ್ಲಿಗೆ ಬಾಯಿ ಬಿಡುವಂತೆ ಕಾಣುತ್ತಿತ್ತು. ಬಿಜೆಪಿಯವರ ಕಾಲದಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಸೆಸ್‌ನಲ್ಲಿ ಪರಿಹಾರ ಕೊಡುವುದನ್ನು ನಿಲ್ಲಿಸಿದರು. ಇದರಿಂದ ನಮಗೆ ವರ್ಷಕ್ಕೆ 18-20 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಕಡಿಮೆಯಾಯಿತು. ಕೇಂದ್ರದವರು ಜನರಿಂದ ಸೆಸ್ ಸಂಗ್ರಹಿಸುವುದನ್ನು ನಿಲ್ಲಿಸಲಿಲ್ಲ.
- ಮೋದಿ ಸರ್ಕಾರ ತೆರಿಗೆ ಪಾಲಿನಲ್ಲೂ ರಾಜ್ಯಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದರು. 2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ಇತ್ತು. ಆಗ ನಮ್ಮ ರಾಜ್ಯಕ್ಕೆ ತೆರಿಗೆ ಪಾಲು 35,895 ಕೋಟಿ ರೂ. ಸಿಗುತ್ತಿತ್ತು. ಆದರೆ ಈಗ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸುಮಾರು 51 ಸಾವಿರ ಕೋಟಿ ರೂ ಮಾತ್ರ ತೆರಿಗೆ ಪಾಲು ಸಿಗಬಹುದು. 2018 ಕ್ಕೆ ಹೋಲಿಸಿದರೂ ಸಹ ನಮಗೆ ಕನಿಷ್ಠ ಅಂದರೂ 73 ಸಾವಿರ ಕೋಟಿ ರೂ.ನಷ್ಟು ಪಾಲು ಸಿಗಬೇಕಿತ್ತು. ಇಷ್ಟಾದರೂ ಇದೊಂದು ಬಾಬತ್ತಿನಲ್ಲೆ ನಮಗೆ ವರ್ಷಕ್ಕೆ 22 ಸಾವಿರ ರೂ.ಗಳಷ್ಟು ನಷ್ಟವಾಗುತ್ತಿದೆ. ಕರ್ನಾಟಕದಿಂದ ವರ್ಷಕ್ಕೆ 4.5 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆಯನ್ನು ಕೇಂದ್ರವು ಸಂಗ್ರಹಿಸುತ್ತಿದೆ. ಇದರಲ್ಲಿ ಬಿಡಿಗಾಸನ್ನು ಮಾತ್ರ ರಾಜ್ಯಕ್ಕೆ ಕೊಡುತ್ತಿದೆ. ಈ ಕುರಿತು ಬಿಜೆಪಿಯವರು ಎಂದಾದರೂ ಬಾಯಿ ಬಿಟ್ಟಿದ್ದಾರಾ?
- 2017 ರಿಂದ ಈ ವರೆಗೆ ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನದಿಂದ, 15 ನೇ ಹಣಕಾಸು ಆಯೋಗದ ವರದಿಯಿಂದ, ಸೆಸ್ ಮತ್ತು ಸರ್ಛಾರ್ಜುಗಳಲ್ಲಿ ಪಾಲು ಕೊಡದ ಕಾರಣ, 15 ಹಣಕಾಸು ಆಯೋಗ ಹೇಳಿದರೂ ಕೇಂದ್ರವು ಕೊಡದೆ ಉಳಿಸಿಕೊಂಡ 11,495 ಕೋಟಿರೂಗಳಿಂದ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿ ಕೊಡದ ಕಾರಣದಿಂದ ಒಟ್ಟಾರೆ ಕೇಂದ್ರದ ನೀತಿಗಳಿಂದ ರಾಜ್ಯಕ್ಕೆ 2.1 ಲಕ್ಷ ಕೋಟಿ.ರೂಗಳಿಗೂ ಹೆಚ್ಚಿನ ಮೊತ್ತ ರಾಜ್ಯಕ್ಕೆ ನಷ್ಟವಾಗಿದೆ. ಈ ಕುರಿತು ಬಿಜೆಪಿಯವರು ಒಂದು ದಿನವೂ ಮಾತಾಡಲಿಲ್ಲ.
ಇಷ್ಟರ ನಡುವೆಯೂ ರಾಜ್ಯದ ಆರ್ಥಿಕತೆ ಸಧೃಡವಾಗಿದೆ.
- ನಮ್ಮ ಎರಡು ವರ್ಷಗಳ ಬಜೆಟ್ ಗಾತ್ರದ ಸರಾಸರಿ ಬೆಳವಣಿಗೆ ಶೇ.18.3 ರಷ್ಟಿದೆ. ಬಿಜೆಪಿಯ 4 ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಶೇ.5 ರಷ್ಟಿತ್ತು.
- ರಾಜ್ಯದ ಸ್ವಂತ ತೆರಿಗೆಯ ಬೆಳವಣಿಗೆ ಶೇ. 15 ರಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 11 ರಷ್ಟು ಮಾತ್ರ ಇತ್ತು.
- ನಾವು ಗ್ಯಾರಂಟಿ ಯೋಜನೆಗಳು ಸೇರಿದಂತೆ ವರ್ಷಕ್ಕೆ 90 ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ಜನರಿಗೆ ನೇರವಾಗಿ ಡಿಬಿಟಿ ಮೂಲಕ ಹಾಗೂ ಸಬ್ಸಿಡಿ ಪ್ರೋತ್ಸಾಹಧನದ ಮೂಲಕ ನೀಡುತ್ತಿದ್ದೇವೆ. ನಮ್ಮ ಸರ್ಕಾರ ವೃದ್ಧರಿಗೆ, ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ವರ್ಷಕ್ಕೆ 10,400 ಕೋಟಿಗೂ ಹೆಚ್ಚಿನ ಹಣವನ್ನು ಕೊಡುತ್ತಿದ್ದೇವೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 450 ಕೋಟಿ ರೂಗಳನ್ನು ಮಾತ್ರ ನೀಡುತ್ತಿದೆ. ಮನಮೋಹನ್ ಸಿಂಗ್ ರವರ ಕಾಲದಲ್ಲಿ ಈ ವೇತನಗಳೆಷ್ಟಿದ್ದವೊ ಈಗಲೂ ಅಷ್ಟೇ ಇವೆ. ಬೊಮ್ಮಾಯಿಯವರು ಕೇಂದ್ರದಲ್ಲಿದ್ದಾರೆ. ರಾಜ್ಯಕ್ಕೆ ಇವರೆಲ್ಲರಿಂದ ಯಾವ ಅನುಕೂಲವಾಗಿದೆ? ಎಂದು ಸ್ಪಷ್ಟಪಡಿಸಲಿ.
- ರಾಜ್ಯದ ವಿತ್ತೀಯ ಶಿಸ್ತು ನಿಯಮಗಳಿಗೆ ಅನುಗುಣವಾಗಿಯೇ ಇದೆ. ವಿತ್ತೀಯ ಕೊರತೆ ಶೇ.3 ರ ಒಳಗೆ ಇದೆ ಮತ್ತು ನಮ್ಮ ಒಟ್ಟು ಹೊಣೆಗಾರಿಕೆ ಜಿಎಸ್‌ಡಿಪಿಯ ಶೇ.25 ರ ಒಳಗೆ ಇದೆ. ಬಿಜೆಪಿ ಅವಧಿಯಲ್ಲಿ ಇವುಗಳೂ ತಾರಾಮಾರಾ ಆಗಿದ್ದವು.
- ನಮ್ಮ ಬಂಡವಾಳ ವೆಚ್ಚವೂ ಸಹ ನಮ್ಮ ಅಕ್ಕ ಪಕ್ಕದಲ್ಲಿರುವ ಪ್ರಗತಿಪರವೆನ್ನಿಸಿಕೊಂಡ ರಾಜ್ಯಗಳಿಗಿಂತ ಉತ್ತಮವಾಗಿದೆ. ಕರ್ನಾಟಕವು ಈ ವರ್ಷದ ಬಜೆಟ್ ಗಾತ್ರಕ್ಕೆ ಎದುರಾಗಿ ಶೇ.15.01 ರಷ್ಟು ಬಂಡವಾಳ ವೆಚ್ಚ ಮಾಡುತ್ತಿದೆ. 2024-25 ರ ಮೂಲ ಆಯವ್ಯಯದ ಅಂದಾಜಿನ ಪ್ರಕಾರ ಮಹಾರಾಷ್ಟ್ರ-12.74 , ತಮಿಳುನಾಡು- 10.58, ತೆಲಂಗಾಣ-11.58 ರಷ್ಟು ಬಂಡವಾಳ ವೆಚ್ಚವಿದೆ.
- ಬಿಜೆಪಿಯವರು ಎಷ್ಟೇ ಪಿತೂರಿ ಮಾಡಿ ಕರ್ನಾಟಕಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಿದ್ದರೂ ಸಹ ಕರ್ನಾಟಕವು ತಲೆ ಎತ್ತಿ ನಿಲ್ಲುತ್ತಿದೆ. ದೆಹಲಿಯಲ್ಲಿರುವ ಕೇಂದ್ರ ಬಿಜೆಪಿಯ ದ್ರೋಹಗಳನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ನಮ್ಮ ಆರ್ಥಿಕತೆಯನ್ನು ಉಳಿಸಿ ಬೆಳೆಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಆದ್ದರಿಂದಲೆ ನಾವು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿಗೂ ಹೆಚ್ಚಿನ ಹಣ ನೀಡುತ್ತಿದ್ದೇವೆ. ಕೊಬ್ಬರಿ, ತೊಗರಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದರೆ ಅವರ ನೆರವಿಗೆ ಧಾವಿಸಿದ್ದೇವೆ. ಕಲ್ಯಾಣ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಗೆ ಅನುದಾನಗಳನ್ನು ನೀಡುತ್ತಿದ್ದೇವೆ. ಬೊಮ್ಮಾಯಿಯವರು ಜಲ ಸಂಪನ್ಮೂಲ ಸಚಿವರಾಗಿದ್ದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊಡಬೇಕಾದ ಅನುದಾನಗಳನ್ನು ಕೊಡಲಿಲ್ಲ. ಆದರೆ ನಮ್ಮ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡಿ ಮುಗಿಸಲು ತೀರ್ಮಾನಿಸಿದೆ.
- ಇದಷ್ಟೇ ಅಲ್ಲದೆ ನಮ್ಮ ಸರ್ಕಾರ ಸರ್ಕಾರಿ ನೌಕರರಿಗೆ 7 ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಶೇ. 27.5 ರಷ್ಟು ವೇತನವನ್ನು ಹೆಚ್ಚಿಗೆ ಮಾಡಲಾಗಿದೆ. ಈ ವರ್ಷದ 8 ತಿಂಗಳಿಗೆ 16 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿನ ಸಂಬಳವನ್ನು ಕೊಡುತ್ತಿದ್ದೇವೆ.
- ನಮ್ಮ ಆರ್ಥಿಕತೆ ಚೆನ್ನಾಗಿದೆ, ನಮ್ಮ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ಕಾರಣಕ್ಕೆ ಇತ್ತೀಚೆಗೆ ನಡೆದ ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 10.27 ಲಕ್ಷ ಕೋಟಿಗಳಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಒಪ್ಪಂದಗಳಾಗಿವೆ. ಇದನ್ನೆಲ್ಲ ಗಮನಿಸಿಯೆ ರಾಜಕೀಯ ಕಾರಣಗಳಿಂದ ಬಿಜೆಪಿಯವರು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಕುರಿತು ಟೀಕೆಗಳನ್ನು ಮಾಡುತ್ತಿದ್ದಾರೆ.
- ರಾಜ್ಯದ ಆರ್ಥಿಕತೆಯ ಬಗ್ಗೆ ಮಾತನಾಡುವ ಬೊಮ್ಮಾಯಿ ಮತ್ತು ಬಿಜೆಪಿಯವರು ಕೇಂದ್ರದ ಬಜೆಟ್ಟನ್ನು ಸರಿಯಾಗಿ ಓದಿದ್ದಾರೆಯೆ? ಎಂಬುದನ್ನು ಈ ಸಂದರ್ಭದಲ್ಲಿ ಕೇಳ ಬಯಸಿದೆ. 2024-25 ರ ಮೂಲ ಬಜೆಟ್ಟಿನ ಅಂದಾಜು 48.21 ಲಕ್ಷ ಕೋಟಿಗಳಷ್ಟಿತ್ತು. ಆದರೆ ಅದನ್ನು ಪರಿಷ್ಕರಿಸಿ 47.16 ಲಕ್ಷ ಕೋಟಿ ರೂ.ಗಳಿಗೆ ಇಳಿಸಿದ್ದು ಯಾಕೆ? ಆಯವ್ಯಯದ ಅಂದಾಜಿಗೂ ಪರಿಷ್ಕೃತ ಅಂದಾಜಿಗೂ 1,04,025 ಕೋಟಿಗಳಷ್ಟು ಕಡಿಮೆಯಾಗಲು ಕಾರಣವೇನು? ಬಂಡವಾಳ ವೆಚ್ಚವನ್ನು 92,682 ಕೋಟಿ ಕಡಿಮೆ ಮಾಡಲಾಗಿದೆ. ಅದೂ ಹೋಗಲಿ 2024-25 ರ ಮೂಲ ಅಂದಾಜಿಗೆ ಹೋಲಿಸಿದರೆ 2025-26 ರ ಬಜೆಟ್ಟಿನ ಗಾತ್ರದಲ್ಲಿ ಶೇ. 5.07 ರಷ್ಟು ಮಾತ್ರ ಹೆಚ್ಚಳವಾಗಿದೆ. ಪರಿಷ್ಕೃತ ಆಯವ್ಯಯಕ್ಕೆ ಹೋಲಿಸಿದರೂ ಶೇ.7.4 ರಷ್ಟು ಮಾತ್ರ ಬೆಳವಣಿಗೆ ಇದೆ. ಹಣದುಬ್ಬರವನ್ನು ಕಳೆದು ಲೆಕ್ಕ ಹಾಕಿದರೆ ಈ ವರ್ಷದ ಬಜೆಟ್ ನಕಾರಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿದೆ ಯಾಕೆ? ದೊಡ್ಡ ಆರ್ಥಿಕ ತಜ್ಞರುಗಳಂತೆ ಮಾತನಾಡುವ ಬಿಜೆಪಿಯವರು ಈ ಸತ್ಯವನ್ನು ಯಾಕೆ ಮುಚ್ಚಿಡುತ್ತಿದ್ದಾರೆ?
- ಸಾಲದ ಬಗ್ಗೆ ಮಾತನಾಡುವ ವಿಜಯೇಂದ್ರ ಅವರು ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದ ಸಾಲ ಎಷ್ಟಾಗಿದೆ? ರಾಜ್ಯಗಳ ಸಾಲ ಎಷ್ಟಾಗಿದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು. 2013-14 ರಲ್ಲಿ 53.11 ಲಕ್ಷ ಕೋಟಿ ರೂಗಳಷ್ಟಿದ್ದ ಕೇಂದ್ರದ ಸಾಲ ನಿರ್ಮಲಾ ಸೀತಾರಾಮನ್ ಅವರೇ ಈ ಬಜೆಟ್ ನಲ್ಲಿ ಘೋಷಿಸಿರುವಂತೆ 2026 ರ ಮಾರ್ಚ್ ವೇಳೆಗೆ 200.16 ಲಕ್ಷ ಕೋಟಿಗಳಷ್ಟಾಗುತ್ತಿದೆ. ಅದನ್ನೂ ಮೀರಬಹುದು. 11 ವರ್ಷಗಳಲ್ಲಿ 147 ಲಕ್ಷ ಕೋಟಿಗಳಿಗೂ ಹೆಚ್ಚಿನ ಸಾಲವನ್ನು ಮೋದಿ ಸರ್ಕಾರ ಮಾಡಿದೆ. ಇಷ್ಟು ಬೃಹತ್ ಮೊತ್ತದ ಸಾಲ ಯಾಕಾಯಿತು?
- ಮೋದಿಯವರ ಆರ್ಥಿಕ ನೀತಿಗಳಿಂದ ರಾಜ್ಯಗಳ ಆರ್ಥಿಕ ಸ್ಥಿತಿಯೂ ಅಯೋಮಯವಾಗಿದೆ. 2014 ರ ಮಾರ್ಚ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳ ಸಾಲ 25 ಲಕ್ಷ ಕೋಟಿ ರೂ ಇದ್ದದ್ದು ಈಗ 95 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಸಾಲ 70 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ರಾಜ್ಯಗಳೂ ತ್ರಾಸ ಪಡುತ್ತಿವೆ. ಕೇಂದ್ರದ ಆರ್ಥಿಕತೆಯೂ ದುರ್ಬಲವಾಗುತ್ತಿದೆ.
- ಮತ್ತೊಮ್ಮೆ ತಿಳಿಸಬಯಸುವುದೇನೆಂದರೆ ನಮ್ಮ ರಾಜ್ಯದ ಆರ್ಥಿಕತೆ ಬಿಜೆಪಿಯ ದ್ರೋಹವನ್ನು ಮೆಟ್ಟಿ ನಿಲ್ಲುವಷ್ಟು ಸದೃಢವಾಗಿದೆ. ನಾವು ದೆಹಲಿಯ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಮಾಡುತ್ತಿರುವ ದ್ರೋಹದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತೇವೆ. ಇಷ್ಟರ ನಡುವೆಯೂ ನಾವು ನುಡಿದಂತೆ ನಡೆಯುತ್ತೇವೆ, ನಮ್ಮ ಜನರ ಜೊತೆ ನಿಲ್ಲುತ್ತೇವೆ.
ರಾಜ್ಯದ ವಿರೋಧ ಪಕ್ಷದವರು ಸುಳ್ಳು ಹೇಳುವುದನ್ನು ನಿಲ್ಲಿಸಿ ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಸರ್ಕಾರವು ನಡೆಸುತ್ತಿರುವ ಹೋರಾಟದಲ್ಲಿ ಜೊತೆಯಾಗಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.