ಶಿವಮೊಗ್ಗ: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಭೂ ಮಾಫಿಯಾ ದಂಧೆ. ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿ ಅನಾಮಧೇಯ ವ್ಯಕ್ತಿಯ ಹೆಸರಿಗೆ ಮಾಡಲು ಪ್ರಯತ್ನ. ಈ ಘಟನೆ ಸಾಗರದಲ್ಲಿ ಬೆಳಕಿಗೆ ಬಂದಿದೆ. ಅದೂ ಸರ್ಕಾರಿ ಅಧಿಕಾರಿಯಿಂದಲೇ ಭೂಗಳ್ಳರ ಜೊತೆಗೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ತಹಶೀಲ್ದಾರರಿಗೆ ಬರೆದಿರುವಂತ ಪತ್ರದಿಂದಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟದ ಸಮೀಪದ ಸರ್ವೆ ನಂ.12ರ ಸರ್ಕಾರಿ ಭೂಮಿಯನ್ನೇ ಭೂಗಳ್ಳರಿಗೆ ನಕಲಿ ದಾಖಲೆ ಸೃಷ್ಠಿಸಿ ಲಪಟಾಯಿಸೋದಕ್ಕೆ ಯತ್ನಿಸಿದಂತ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಸಾಗರದ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರು ಜನ ಹೋರಾಟ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಯನ್ನು ಮಾಡಿದ್ದರಿಂದ ಇಡೀ ಪ್ರಕರಣ ಬಟಾ ಬಯಲಾಗಿದೆ. ಸರ್ಕಾರಿ ಭೂಮಿ ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಯ ಬಹುದೊಂಡ ಹಗರಣ ಬೆಳಕಿಗೆ ಬಂದಿದೆ.
ಏನಿದು ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸೋ ಕೇಸ್?
ಸಾಗರ ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಭೂಗಳ್ಳರು ಸರ್ಕಾರಿ ಜಾಗ ಎಲ್ಲೆಲ್ಲಿ ಇದ್ಯೋ ಅಲ್ಲೆಲ್ಲ ತಮ್ಮ ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಠಿಸಿ, ಅನಾಮಿಕರ ಹೆಸರಿಗೆ ಮಾಡಿಸೋ ಅಡ್ಡದಾರಿಯನ್ನು ಹಿಡಿದಿದ್ದಾರೆ.
ಇದೇ ಮಾದರಿಯಲ್ಲೇ ಸಾಗರ ತಾಲ್ಲೂಕಿನ ಕಸಬಾ ಹೋಬಳಿಯ ಮಂಕೋಡು ಗ್ರಾಮದ ಸರ್ವೇ ನಂ 12ರಲ್ಲಿ ಸುಮಾರು 59 ಎಕರೆ 35 ಗುಂಟೆ ಸರ್ಕಾರಿ ಜಾಗ ಖಾಲಿ ಇರೋ ವಿಚಾರ ಭೂಗಳ್ಳರ ಕಣ್ಣಿಗೆ ಬಿದ್ದಿದೆ. ಈ ಜಾಗ ದನದ ಮುಪ್ಪತ್ತಿಗಾಗಿ ಮೀಸಲಿಟ್ಟಿದ್ದಾಗಿದೆ.
ಇಂತಹ 59 ಎಕಲೆ 35 ಗುಂಟೆ ಜಾಗದಲ್ಲಿ 16 ಎಕರೆಗೆ ನಕಲಿ ದಾಖಲೆ ಸೃಷ್ಠಿಸಿ ಅನಾಮಿಕ ವ್ಯಕ್ತಿಯ ಹೆಸರಿಗೆ ಮಾಡೋ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಸಾಗರ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳೇ ಭೂಗಳ್ಳರಿಗೆ ಸಾಥ್ ನೀಡಿ, ದಂಧೆಯಲ್ಲಿ ಕೈ ಜೋಡಿಸಿದ್ದಾರೆ.
ಸರ್ಕಾರಿ ದಾಖಲೆಯನ್ನೇ ತಿದ್ದಿದ ಸಾಗರ ತಾಲ್ಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ
ಸರ್ಕಾರಿ ಕಚೇರಿಯಲ್ಲಿನ ಕಡತಗಳನ್ನು ಹೊರಗಿನವರು ಬಂದು ತಿದ್ದೋದಕ್ಕೆ ಬಿಲ್ ಖುಲ್ ಸಾಧ್ಯವೇ ಇಲ್ಲ. ಹಾಗೊಂದು ವೇಳೆ ತಿದ್ದಿದ್ದರೂ ಅದಕ್ಕೆ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿಗಳು ಸಾಥ್ ನೀಡಿದಾಗಲೇ ಸಾಧ್ಯ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ ಆಗಿದೆ.
ಹೀಗೆ ಇರುವಾಗ ಸಾಗರ ತಾಲ್ಲೂಕು ಕಚೇರಿಯಲ್ಲಿ ಮಂಕೋಡು ಗ್ರಾಮದ ಸರ್ವೆ ನಂ.12ರಲ್ಲಿನ ಸರ್ಕಾರಿ ದಾಖಲೆಯಲ್ಲಿದ್ದಂತ ದನದ ಮುಪ್ಪತ್ತಿನ ಜಾಗದಲ್ಲಿ 16 ಎಕರೆಯನ್ನು ಭೂಗಳ್ಳರಿಗೆ ಮಾಡಿ ಕೊಡೋ ಸಂಬಂಧ ದಾಖಲೆಯನ್ನೇ ತಿದ್ದಿದ್ದಾರೆ. 1964 ರಿಂದ 2000 ವರ್ಷದವರೆಗಿನ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಯನ್ನು ತಿದ್ದಲಾಗಿದೆ.
ಇದಷ್ಟೇ ಅಲ್ಲದೇ ಬೇರೆ ಬೇರೆಯವರ ಹೆಸರಿಗೆ 8 ಎಕರೆ, 2 ಎಕರೆ ಸರ್ಕಾರಿ ಜಾಗ ಮಂಜೂರಾಗಿದೆ ಅಂತ ಕೈ ಬರಹದ ಪಹಣಿಯಲ್ಲಿ ತಿದ್ದುಪಡಿಯನ್ನು ಮಾಡಿ ಜಾಲಾಕಿ ಕೃತ್ಯವನ್ನು ಸಾಗರದ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳೇ ಎಸಗಿರೋದು ಬೆಳಕಿಗೆ ಬಂದಿದೆ.
ಮೂಲ ದಾಖಲೆಗಳನ್ನೇ ಭೂಗಳ್ಳರಿಗೆ ಕೊಟ್ಟ ಸರ್ಕಾರಿ ಅಧಿಕಾರಿ, ಸಿಬ್ಬಂದಿ
ಮಂಕೋಡು ಸರ್ವೆ ನಂ.12ಕ್ಕೆ ಸಂಬಂಧಿಸಿದಂತ ದಾಖಲೆಯಲ್ಲಿ 16 ಎಕರೆ ಒಬ್ಬರಿಗೆ, 8 ಎಕರೆ ಮಗದೊಬ್ಬರಿಗೆ, 2 ಎಕರೆ ಜಾಗ ಇನ್ನೊಬ್ಬರಿಗೆ ನಕಲಿ ದಾಖಲೆ, ತಿದ್ದುಪಡಿ ಮಾಡಿ ಸರ್ಕಾರಿ ಕಚೇರಿಯವರೇ ಮಾಡಿಕೊಟ್ಟಿದ್ದಾರೆ.
ಅಚ್ಚರಿ ಎನ್ನುವಂತೆ ಈ ದನದ ಮುಪ್ಪತ್ತಿನ ಜಾಗಕ್ಕೆ ಸಂಬಂಧಿಸಿದಂತ ಮೂಲ ದಾಖಲೆಗಳನ್ನೇ ಭೂಗಳ್ಳರ ಪಾಲಾಗುವಂತೆ ನೀಡಿ, ದಾಖಲೆಗಳೇ ನಾಪತ್ತೆಯಾಗಿರೋ ನಾಟಕವನ್ನು ಸೃಷ್ಠಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಸಾಗರದ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳ ನೆರವಿಲ್ಲದೇ ಹೇಗೆ ಸಾಧ್ಯ ಅಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸರ್ಕಾರಿ ಅಧಿಕಾರಿಯಿಂದಲೇ ನಕಲಿ ದಾಖಲೆ ಸೃಷ್ಠಿ ಪ್ರಕರಣ ಬಯಲು
ಸಾಗರ ತಾಲ್ಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವಂತ ಸಂತೋಷ್ ಎಂಬುವರೇ ತಹಶೀಲ್ದಾರ್ ಅವರಿಗೆ ಪತ್ರ ಬರೆದು, ಈ ಪ್ರಕರಣವನ್ನು ಬಯಲಿಗೆ ಇಟ್ಟಿದ್ದಾರೆ. ಮಂಕೋಡು ಗ್ರಾಮದ ಸರ್ವೆ ನಂ.12ಕ್ಕೆ ಸಂಬಂಧಿಸಿದಂತ ನಕಲಿ ದಾಖಲೆ ಸೃಷ್ಠಿಯ ಇಂಚಿಂಚೂ ಮಾಹಿತಿಯನ್ನು ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.
SDA ಸಂತೋಷ್ ತಹಶೀಲ್ದಾರರಿಗೆ ಬರೆದಿರುವಂತ ಪತ್ರದಲ್ಲಿ ಏನಿದೆ?
ದಿನಾಂಕ 20-08-2024ರಂದು ಪತ್ರ ಬರೆದಿರುವಂತ ಅವರು, ನಾನು ಸಾಗರ ತಾಲ್ಲೂಕು ಕಛೇರಿಯ ಅಭಿಲೇಖಾಲಯ ಶಾಖೆಯಲ್ಲಿ ವಿಷಯ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸದರಿ ಶಾಖೆಯಲ್ಲಿ ದಿನಾಂಕ:30-05-2024 ರಂದು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿರಂಜನ್ ಎಂಬ ವ್ಯಕ್ತಿ ಮಂಕೋಡು ಗ್ರಾಮ ಸ ನಂ 12ರಲ್ಲಿ 16-00 ಎಕರೆ ಗ ಸಂಬಂಧಿಸಿದ ದರಖಾಸ್ತು ಕಡತದ ನಕಲನ್ನು ಕೋರಿರುತ್ತಾರೆ ಎಂದಿದ್ದಾರೆ.
ಆ ಕಡತ ಅನುಮಾನಸ್ಪದವಾಗಿ ಕಂಡುಬಂದಿರುತ್ತದೆ. ಏಕಂದರೆ ಈ ಹಿಂದೆ ನಾನು ಕೆಲವು ಸರ್ವೆ ನಂ ಹಾಗೂ ಗ್ರಾಮಗಳ, ಕಡತಗಳು ಮಿಶ್ರಣಗೊಂಡಿದ್ದರಿಂದ ಚೆಕ್, ಲೀಸ್ಟ್ ಗಳನ್ನು ಕಡತ ಹುಡುಕಲು ಸ್ಕ್ಯಾನ್ ಮಾಡಿಕೊಂಡಿರುತ್ತೇನೆ. ಸದರಿ ಕಡತ ಅನುಮಾನಸ್ಪದವಾಗಿ ಕಂಡುಬಂದ ಬೆನ್ನಲ್ಲಿ ಈ ಹಿಂದೆ ಸ್ಕ್ಯಾನ್ ಮಾಡಿದ ಚೆಕ್, ಲೀಸ್ಟ್ ನ ಪರಿಶೀಲಿಸಿದಾಗ ಪುಟ ಸಂಖ್ಯೆಯಿಂದ ಸದರಿ ಕಡತದಲ್ಲಿ ಮಂಕೋಡು ಗ್ರಾಮ ಸರ್ವೆ ನಂ 12 ರ ದರಖಾಸ್ತು ಕಡತ ಸೇರ್ವಡೆಗೊಂಡಿರುವ ಬಗ್ಗೆ ದೃಢಪಟ್ಟಿರುತ್ತದೆ ಎಂಬುದಾಗಿ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಇನ್ನೂ 1964 ರಿಂದ 2000 ರವರೆಗಿನ ಆರ್.ಟಿ.ಸಿ ಯನ್ನು ಪರಿಶೀಲಿಸಿದಾಗ ಪ್ರತಿ ವರ್ಷದ ಆ .ಟಿ.ಸಿ ಯಲ್ಲಿನ ವಿಸ್ತೀರ್ಣ ತಿನ್ನುವಡಿಗೊಂಡಿರುವುದು ಕಂಡುಬಂದಿರುತ್ತದೆ. ನಾನು ಸರ್ಕಾರಿ ನೌಕರನಾಗಿದ್ದು, ಸರ್ಕಾರದ ಆಸ್ತಿಯನ್ನು ಸಂರಕ್ಷಿಸುವುದು ನನ್ನ ಕರ್ತವ್ಯ ಆಗಿರುವುದರಿಂದ ಕೂಡಲೇ ಆರ್ ಆರ್ ಟಿ ಶಾಖೆಯ ಶಿರಸ್ತೇದಾರ್ ಮತ್ತು ತಹಶೀಲ್ದಾರ್ ಗೆ ಮೌಕಿಕವಾಗಿ ವಿಷಯವನ್ನು ತಿಳಿಸಿರುತ್ತೇನೆ ಎಂದಿದ್ದಾರೆ.
ಸದರಿ ಕಡತವನ್ನು ಆರ್ ಆರ್ ಟಿ ಶಾಖೆಯ ಶಿರಸ್ತೇದಾರರು ತಹಶೀಲ್ದಾರರ ಬಳಿ ಚರ್ಚಿಸಲು ಅಭಿಲೇಖಾಲಯ ಶಾಖೆಯಿಂದ ಪಡೆದಿರುತ್ತಾರೆ. ಈ ಕೃತ್ಯವನ್ನು ಕಛೇರಿಯ ಕೆಲ ಸಿಬ್ಬಂಧಿಗಳ ಸಹಾಯದಿಂದ ಅನ್ಯ ವ್ಯಕ್ತಿಗಳು ಎಸಗಿರುವುದಾಗಿ ಸಹ ಅನುಮಾನ ಬಂದಿರುತ್ತದೆ. ಈ ಪ್ರಕರಣ ಗಂಭಿರವಾಗಿರುವುದರಿಂದ ಮುಂದಿನ ದಿನಗಳಲ್ಲಿನ ಆಗು ಹೋಗುಗಳಿಗೆ ನಾನು ವಿಷಯದ ಕುರಿತು ಉತ್ತರ ನೀಡಬೇಕಾಗಿದೆ. ಈ ಪ್ರಕರಣದ ಕುರಿತು ಲಿಖಿತವಾಗಿ ತಮ್ಮ ಮುಂದೆ ಪ್ರಸ್ತುತ ವಡಿಸುತ್ತಾ ಒಂದು ವೇಳೆ ನಾನು ವ್ಯಕ್ತವಡಿಸಿದಂತಹ ಅನುಮಾನ ಸತ್ಯವಾಗಿದ್ದಲ್ಲಿ, ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಆಸ್ತಿಯನ್ನು ಉಳಿಸಬೇಕಾಗಿ ಅಂತ ಎಸ್ ಡಿ ಎ ಸಂತೋಷ್ ಅವರು ಸಾಗರ ತಹಶೀಲ್ದಾರರರಲ್ಲಿ ಮನವಿ ಮಾಡಿದ್ದಾರೆ.
ಕಂದಾಯ ಸಚಿವರೇ, ಜಿಲ್ಲಾಧಿಕಾರಿಗಳೇ ಏನಿದು ಸರ್ಕಾರಿ ಅಧಿಕಾರಿಗಳ ಭೂ ಮಾಫಿಯಾ ದಂಧೆ.?
ಸರ್ಕಾರಿ ಭೂಮಿಯನ್ನು ರಕ್ಷಿಸಿ, ಭೂಗಳ್ಳರ ಪಾಲಾಗದಂತೆ ಕಾಪಿಡುವ ಕೆಲಸವನ್ನು ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮಾಡಬೇಕಿದೆ. ಆದರೇ ಸಾಗರ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಇದಕ್ಕೆ ಹೊರತಾದಂತಿದೆ. ಸರ್ಕಾರಿ ಜಾಗಕ್ಕೆ ಸಂಬಂಧಿಸಿದಂತ ಸರ್ಕಾರಿ ಕತವನ್ನೇ ತಿದ್ದುಪಡಿ ಮಾಡಿ, ನಕಲಿ ದಾಖಲೆ ಸೃಷ್ಠಿಸಲು ನೆರವಾಗಿರೋದು ಅಕ್ಷಮ್ಯ ಅಪರಾಧವೇ ಸರಿ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೇ ಏನಿದು ನಿಮ್ಮ ಇಲಾಖೆಯ ಸರ್ಕಾರಿ ಅಧಿಕಾರಿಗಳ ಭೂ ಮಾಫಿಯ ದಂಧೆ? ಸರ್ಕಾರಿ ಜಾಗವನ್ನೇ ಭೂಗಳ್ಳರ ಪಾಲು ಮಾಡ ಹೊರಟವರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಸಾಗರದಲ್ಲಿ ಮತ್ತಷ್ಟು ಭೂ ಮಾಫಿಯಾ ದಂಧೆಗೆ ಇದು ಕುಮ್ಮಕ್ಕು ಕೊಟ್ಟಂತೆಯೇ ಆಗಲಿದೆ. ಕೂಡಲೇ ತನಿಖೆ ನಡೆಸಿ, ಮಂಕೋಡು ಗ್ರಾಮದ ಸರ್ವೆ ನಂ 12ರ ಕಡತ ತಿದ್ದಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯವಾಗಿದೆ. ಈ ಸಂಬಂಧ ಸಾಗರ ಉಪ ವಿಭಾಗೀಯ ಅಧಿಕಾರಿಗಳಿಗೆ ಸೂರನಗದ್ದೆ ಹಾಗೂ ಮರಸ ಗ್ರಾಮಸ್ಥರು, ಸರ್ಕಾರಿ ಜಾಗ ಉಳಿಸುವಂತೆಯೂ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ