ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನಕ್ಕೆ ಅನುಮೋದನೆ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
• ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ರೂ.37.98 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
• ರೂ.75 ಕೋಟಿಗಳ ಅಂದಾಜು ವೆಚ್ಚದಲ್ಲಿ ನವೋದ್ಯಮಗಳಿಗಾಗಿ ಒಂದು ಸಂಯೋಜಿತ ಬಿಯಾ೦ಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಅನ್ನು ಸ್ಥಾಪಿಸಲು ನಿರ್ಧಾರ
• ಕೋಮು-ಸೌಹಾರ್ದದ ಪ್ರತೀಕದಂತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಚಿ೦ತಾಮಣಿ ತಾಲ್ಲೂಕು ಮುರಗಮಲ್ಲ ಗ್ರಾಮದ ಹಜರತ್ ಫಖೀ-ಷಾ-ವಲಿ ದರ್ಗಾ (ಅಮ್ಮಜಾನ್-ಬಾವ್‌ಜಾನ್ ದರ್ಗಾ)ವನ್ನು ರೂ.31.99 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತೀರ್ಮಾನ
• ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ “ಪ್ರಜಾಸೌಧ” ತಾಲೂಕು ಆಡಳಿತ ಕೇಂದ್ರದ ನಿರ್ಮಾಣ ಕಾಮಗಾರಿಯ ರೂ.10.91 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ
• ಗದಗ ಜಿಲ್ಲೆಯ ಗದಗ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡ “ಪ್ರಜಾಸೌಧ” ನಿರ್ಮಾಣ ಕಾಮಗಾರಿಯ ರೂ.16.00 ಕೋಟಿಗಳ ಸವಿವರ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
• ಕೆ.ಜಿ.ಟಿ.ಟಿ.ಐ ಕಲಬುರಗಿಯ ಕೇಂದ್ರದಲ್ಲಿ ಪ್ರತಿಷ್ಠಿತ ಉತ್ಪಾದನಾ ಕೈಗಾರಿಕೆಗಳ ಸಹಯೋಗದೊಂದಿಗೆ ಸಿ.ಎನ್.ಸಿ ತಂತ್ರಜ್ಞಾನದಲ್ಲಿ ಶ್ರೇಷ್ಠತಾ ಕೇ೦ದ್ರವನ್ನು ರೂ.16.00 ಕೋಟಿಗಳಲ್ಲಿ ಸ್ಥಾಪಿಸಲು ನಿರ್ಧಾರ
• ಬೆಂಗಳೂರು ನಗರದ ಚಾಮರಾಜಪೇಟೆಯ ಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ವಸತಿ ಶಾಲಾ ಕಟ್ಟಡವನ್ನು ರೂ.25.00 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ
• ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ 61 ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನಿವೇಶನ ಲಭ್ಯವಿರುವ 56 ವಸತಿ ಶಾಲೆಗಳಿಗೆ ಮತ್ತು ಭಾಗಶ: ಕಟ್ಟಡ ನಿರ್ಮಾಣವಾಗಿರುವ 05 ವಸತಿ ಶಾಲೆಗಳು ಸೇರಿದಂತೆ ಒಟ್ಟು 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ
• ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶಹಾಪೂರ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಇವರ ಪುತ್ಥಳಿಯನ್ನು ನಿರ್ಮಾಣ ಮಾಡಲು ನಿಗಮದ 198.35 ಚ.ಮೀ ಜಾಗವನ್ನು ಉಚಿತವಾಗಿ ಒದಗಿಸಲು ನಿರ್ಧಾರ
• ಕರ್ನಾಟಕ ಕ್ಲೀನ್ ಮೊಬಿಲಿಟಿ ನೀತಿ 2025-30 ರ ಅನುಷ್ಠಾನಕ್ಕೆ ದಿನಾಂಕ: 11.02.2025 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಮಂಜೂರಾತಿಯನ್ನು ನೀಡಲಾಗಿದೆ. ಕರ್ನಾಟಕ ಸರ್ಕಾರವು ಸಂಪೂರ್ಣ ಕ್ಲೀನ್ ಮೊಬಿಲಿಟಿ ವಾಹನದ ಸರಪಳಿಯಲ್ಲಿ ರೂ.50,000 ಕೋಟಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಇದರಿಂದ ಒಂದು ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯಾಗಲಿದೆ.
• ಕರ್ನಾಟಕ ಕೈಗಾರಿಕಾ ನೀತಿ 2025-30ರ ಆದೇಶಕ್ಕೆ ಘಟನೋತ್ತರ ಅನುಮೋದನೆ
• ಐಐಐಟಿ-ಬೆಂಗಳೂರು ಸಂಸ್ಥೆಯ ಮೂಲಸೌಕರ್ಯ ವಿಸ್ತರಣಾ ಯೋಜನೆಗೆ ಸರ್ಕಾರವು ಒಟ್ಟು ಯೋಜನಾ ವೆಚ್ಚ ರೂ.817 ಕೋಟಿಗಳ ಪೈಕಿ ರೂ.285.95 ಕೋಟಿಗಳ (ಶೇ.35ರಷ್ಟು) ಕೊಡುಗೆ ನೀಡಲು ಅನುಮೋದನೆ. ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ರೂ.25 ಕೋಟಿಗಳ ಆರಂಭಿಕ ಹಂಚಿಕೆಯನ್ನು ವಿತರಿಸಿ, ಉಳಿದ ಕೊಡುಗೆಗಳನ್ನು ಮುಂದಿನ ಏಳು ವರ್ಷಗಳಲ್ಲಿ ಹಂತ ಹಂತವಾಗಿ ನೀಡಲು ಅನುಮೋದನೆ.
• ವಿಜಯಪುರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ವಿಜಯಪುರ ಕಿರು ತಾರಾಲಯ ಯೋಜನೆಯ ರೂ. 12.88 ಕೋಟಿ ಅಂದಾಜು ವೆಚ್ಚದ ಪರಿಷ್ಕೃತ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
• 2024-25ನೇ ಸಾಲಿನಿಂದ ಯೋಜನಾ ವೆಚ್ಚ ರೂ.15.30 ಕೋಟಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 306 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೋಧಿಸುವ ಶಿಕ್ಷಣ ತರಬೇತುದಾರರನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ನಿರ್ಧಾರ
• ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯ 23 ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ
• ಬೆಂಗಳೂರು ನೀರು ಸರಬರಾಜು ಮತ್ತು ಒಳಚರ೦ಡಿ ಮ೦ಡಳಿಯ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮತ್ತು ಮರು ರೂಪಿಸುವ ಒಟ್ಟು ರೂ.199.00 ಕೋಟಿಗಳ ಅಂದಾಜು ಮೊತ್ತದ
• ವಸತಿ ರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮೀನುಗಾರರ ಮಾದರಿ ಗ್ರಾಮಗಳ ಅಭಿವೃದ್ಧಿಗಾಗಿ “ಮಸ್ಯಾಶ್ರಯ ಯೋಜನೆ” ಅಡಿ 10,000 ಮನೆಗಳ ಮಂಜೂರು
• ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ನಿರ್ಣಯ
• ಸಮಾಜ ಕಲ್ಯಾಣ ಇಲಾಖೆಯ 63 ಡಾ, ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಿಗೆ ಅಂದಾಜು ರೂ. 441 ಕೋಟಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ
• ರೂ.22.41 ಕೋಟಿ ವೆಚ್ಚದಲ್ಲಿ ಕೇಂದ್ರ ಪುರಸ್ಕೃತ “ಪ್ರಸಾದ್ 2.0″ ಯೋಜನೆಯಡಿಯಲ್ಲಿ ಬೀದರ್‌ನ ಶ್ರೀ ಪಾಪನಾಶ ಶಿವ ದೇವಸ್ಥಾನದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನಿರ್ಧಾರ
• ಕೇಂದ್ರ ಪುರಸ್ಕೃತ “ಪ್ರಸಾದ್ 2.0″ ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಬೆಳಗಾವಿ ಜಿಲ್ಲೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವನ್ನು ರೂ.18.37 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧಾರ
• ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ “ಪ್ರಸಾದ್” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನವನ್ನು ರೂ.61.99 ಕೋಟಿ (ಕೇಂದ್ರದ ಪಾಲು ರೂ.45.71 ಕೋಟಿ ಹಾಗೂ ರಾಜ್ಯದ ಪಾಲು ರೂ.16.28 ಕೋಟಿ) ಪರಿಷ್ಕೃತ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನ.