ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳಿಗೆ ನಿರಂತರ ಅನ್ಯಾಯವಾಗುತ್ತಿದ್ದು, ನಾವು ಎಚ್ಚತ್ತುಕೊಳ್ಳದಿದ್ದರೆ ಮುಂದಿನ ಬಜೆಟ್‍ನಲ್ಲೂ ಇದೇ ಕೆಲಸವನ್ನು ಸರಕಾರ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಏರ್ಪಡಿಸಿದ ‘ಎಸ್‍ಸಿಪಿ- ಟಿಎಸ್‍ಪಿ ಹಣ ದುರ್ಬಳಕೆ ಮಾಡಿಕೊಂಡ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ’ ಕುರಿತು ಪೂರ್ವಭಾವಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
ಪರಿಶಿಷ್ಟ ಸಮುದಾಯಗಳ ಧ್ವನಿಯಾಗಿ ನಾವು ಹೋರಾಟ ರೂಪಿಸಬೇಕಿದೆ ಎಂದು ತಿಳಿಸಿದರು. ಬಿಜೆಪಿ ಸ್ವಂತ ಶಕ್ತಿಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು, ಶೋಷಿತ, ಪೀಡಿತ ಜನಾಂಗದ ಪರವಾಗಿ ನಾವು ಧ್ವನಿ ಎತ್ತುವುದು ಅನಿವಾರ್ಯ ಎಂದು ತಿಳಿಸಿದರು. ಈ ಹೊಣೆಗೇಡಿ ಸರಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಮುಖಂಡರು ಅಹಿಂದ ಉದ್ಧಾರಕರೆಂದು ಭಾಷಣ ಬಿಗಿಯುತ್ತಾರೆ. ಇಂಥ ಕಾಂಗ್ರೆಸ್ ಸರಕಾರವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಯಾವ ರೀತಿ ಅನ್ಯಾಯ ಮಾಡುತ್ತಿದೆ ಎಂಬುದನ್ನು ನಾವು ಚಿಂತಿಸಬೇಕಿದೆ ಎಂದು ತಿಳಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕೆಂಬ ಧ್ಯೇಯೋದ್ದೇಶದ ಅಂತ್ಯೋದಯದ ಪರಿಕಲ್ಪನೆಯ ಪಕ್ಷ ನಮ್ಮದು ಎಂದು ಗಮನ ಸೆಳೆದರು.
ಸಿದ್ದರಾಮಯ್ಯನವರು ಎಸ್‍ಸಿಪಿ- ಟಿಎಸ್‍ಪಿ ಯೋಜನೆಗೆ ಕಳೆದ ಹಣಕಾಸು ವರ್ಷದಲ್ಲಿ 39,914 ಕೋಟಿ ರೂ. ಘೋಷಿಸಿದ್ದರು. ಆದರೆ, 23,485 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು. ಅದರಲ್ಲಿ 20,404 ಕೋಟಿ ಮಾತ್ರ ವೆಚ್ಚವಾಗಿದೆ ಎಂದು ವಿವರಿಸಿದರು.
ಬಿಜೆಪಿ, ಕಳೆದ ವರ್ಷಗಳಲ್ಲಿ ಅನೇಕ ಹೋರಾಟಗಳನ್ನು ಮಾಡಿದೆ. ಭಂಡ ಸರಕಾರ ಪರಿಶಿಷ್ಟ ಸಮುದಾಯಗಳ ಹಣವನ್ನು ಬೇರೆ ಕಡೆ ಬಳಸಿದೆ. ಶೀಘ್ರವೇ ಮುಖ್ಯಮಂತ್ರಿಗಳು ಮತ್ತೊಂದು ಬಜೆಟ್ ಮಂಡಿಸಲಿದ್ದಾರೆ. ನಾವು ಕೈಕಟ್ಟಿ ಕುಳಿತರೆ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ, ಪಂಗಡದ ಹಣವನ್ನು ಬೇರೆ ಕಡೆಗೆ ಬಳಸಿಕೊಳ್ಳುತ್ತಾರೆ ಎಂದು ನುಡಿದರು.
ರಾಜ್ಯದ ಇಂಧನ ಸಚಿವರು ನೀಡಿದ ಹೇಳಿಕೆಯತ್ತ ಗಮನ ಸೆಳೆದ ಅವರು, ಪಿಡಬ್ಲ್ಯುಡಿ, ನೀರಾವರಿ ಸೇರಿ ವಿವಿಧ ಇಲಾಖೆಗಳು 6 ಸಾವಿರ ಕೋಟಿ ಬಿಲ್‍ಗಳು ಬಾಕಿ ಇಟ್ಟುಕೊಂಡಿವೆ ಎಂದು ಹೇಳಿದ್ದಾಗಿ ವಿವರಿಸಿದರು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಭವದ ಕೊರತೆಯೇ? ಅಥವಾ ಗ್ಯಾರಂಟಿ ಅನುಷ್ಠಾನದ ನಿಟ್ಟಿನಲ್ಲಿ ಅಸಹಾಯಕರಾಗಿ ಸಿದ್ದರಾಮಯ್ಯ ಇವತ್ತು ಕರ್ನಾಟಕವನ್ನು ದುಸ್ಥಿತಿಗೆ ತಳ್ಳುತ್ತಿದ್ದಾರಾ ಎಂದು ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ತಿಳಿಸಿದರು.
ಕರ್ನಾಟಕವು ಸಂಪೂರ್ಣ ದಿವಾಳಿ ಆಗುವ ಕಡೆ ಮುನ್ನಡೆದಿದೆ ಎಂದು ಆರೋಪಿಸಿದ ಅವರು, ಸರಕಾರಿ ನೌಕರರಿಗೆ ವೇತನ ಕೊಡಲು ಸರಕಾರದ ಬಳಿ ಹಣ ಇಲ್ಲ; ಕೆಎಸ್‍ಆರ್‍ಟಿಸಿಗೆ 7 ಸಾವಿರ ಕೋಟಿ ಬಾಕಿ ಇದೆ. ವಿದ್ಯುತ್ ಬಿಲ್ ಕಟ್ಟಲಾಗದ ಸ್ಥಿತಿ ಇದೆ ಎಂದು ತಿಳಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹಿಸಿದ್ದೇನೆ ಎಂದು ಹೇಳಿದರು.
ಚುನಾವಣೆ ಬಂದಾಗಲೆಲ್ಲ ಕಾಂಗ್ರೆಸ್ಸಿಗರು ಡಾ. ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ ಎಂದು ಟೀಕಿಸಿದರು. ಪ್ರಣಾಳಿಕೆಯಲ್ಲಿ ತಿಳಿಸಿದ ಎಲ್ಲ ವಿಷಯಗಳನ್ನು ಅನುಷ್ಠಾನಕ್ಕೆ ತಂದಂತೆ ಈ ಸರಕಾರ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ನುಡಿದಂತೆ ನಡೆದ ಸರಕಾರ ಎಂದು ತಮ್ಮ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಆಡಳಿತದಲ್ಲಿ ರೈತರು, ಬಡವರು, ಯುವಜನತೆಗೆ ಸೇರಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪಿಸಿದರು.
ಶೋಷಿತ ಸಮುದಾಯಗಳಾದ ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳನ್ನು ಒಳಗೊಂಡ ಸಮುದಾಯಗಳನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ರಾಜ್ಯ ಸರಕಾರ ಮೇಲೆತ್ತಬೇಕಿತ್ತು. ಅಧಿಕಾರಕ್ಕೆ ಬಂದಾಗಲೆಲ್ಲ ಡಾ.ಅಂಬೇಡ್ಕರರ ಜಪ ಮಾಡುವ ಕಾಂಗ್ರೆಸ್ಸಿಗರು, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಕಾರ್ಯಾಗಾರದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವರಾದ ಸಿ.ಸಿ.ಪಾಟೀಲ್, ಎನ್.ಮಹೇಶ್, ಎಸ್‍ಸಿ ಮೋರ್ಚಾ ರಾಜ್ಯದ ಅಧ್ಯಕ್ಷ ಸಿಮೆಂಟ್ ಮಂಜು, ಎಸ್‍ಟಿ ಮೋರ್ಚಾ ರಾಜ್ಯದ ಅಧ್ಯಕ್ಷ ಬಂಗಾರು ಹನುಮಂತು, ಶಾಸಕರಾದ ಮಾನಪ್ಪ ವಜ್ಜಲ್, ದುರ್ಯೋಧನ ಐಹೊಳೆ, ಚಂದ್ರು ಲಮಾಣಿ, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಭಾಗವಹಿಸಿದ್ದರು.
ಎಮ್ವಿ ಎನರ್ಜಿ ಕಂಪನಿಯಿಂದ 15 ಸಾವಿರ ಕೋಟಿ ಹೂಡಿಕೆ, 10,000 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ