ಬೆಂಗಳೂರು : ಬರುವ ಮಾರ್ಚ್ 01 ರಿಂದ 20 ರವರೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆಯಲಿದೆ. ಪರೀಕ್ಷಾ ಕಾರ್ಯವನ್ನು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಎಲ್ಲ ಹಂತದ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷೆ ಗೌಪ್ಯತೆ, ಪರೀಕ್ಷೆಯ ಪಾವಿತ್ರ್ಯತೆ ಮತ್ತು ಸಮಗ್ರತೆಗೆ ಧಕ್ಕೆಯಾಗದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಪೊಲೀಸ್ ರಕ್ಷಣೆಯಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು. ಪ್ರಶ್ನೆಪತ್ರಿಕೆಗಳ ರಕ್ಷಣೆಗಾಗಿ ನೇಮಿಸಿರುವ ತಹಶೀಲ್ದಾರ್, ಬಿಇಒ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರನ್ನು ಒಳಗೊಂಡ ವಿಶೇಷ ಪ್ರಶ್ನೆ ಪತ್ರಿಕಾ ಪಾಲಕರ ತ್ರಿಸದಸ್ಯ ಸಮಿತಿ ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಡೆಸ್ಕ್, ಗಾಳಿ-ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳು ಕಲ್ಪಿಸಬೇಕು.
ಪರೀಕ್ಷಾ ಗೌಪ್ಯತೆ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 163ರ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿ, ಆದೇಶಿಸುವರು. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿ ಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿ ಟಿವಿ ಅಳವಡಿಸಬೇಕು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್ ಮೂಲಕ ದಾಖಲಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಎರಡು ಗಂಟೆ ಮುಂಚಿತವಾಗಿ ಬೆಳಿಗ್ಗೆ 8ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಥವಾ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ :
ಮಾ. 01 ರಂದು ಕನ್ನಡ, ಅರೇಬಿಕ್. ಮಾ. 03-ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ. ಮಾ. 04-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕøತ, ಫ್ರೆಂಚ್. ಮಾ. 05-ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ. ಮಾ. 07-ಇತಿಹಾಸ, ಭೌತಶಾಸ್ತ್ರ. ಮಾ. 10-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ. ಮಾ. 12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ. ಮಾ. 13- ಅರ್ಥ ಶಾಸ್ತ್ರ. ಮಾ. 15- ಇಂಗ್ಲೀಷ್. ಮಾ. 17- ಭೂಗೋಳಶಾಸ್ತ್ರ. ಮಾ. 18-ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ. ಮಾ. 19-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್. ಮಾ.20- ಹಿಂದಿ.