ನವದೆಹಲಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಹೆಸರನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಇಂದು ನವದೆಹಲಿಯಲ್ಲಿ ಸಭೆ ಸೇರಲಿದೆ.
ಈ ಸಮಿತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಇದ್ದಾರೆ.ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಫೆಬ್ರವರಿ 18 ರಂದು ನಿವೃತ್ತರಾಗುವ ಮುನ್ನ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯಲಿದೆ.
ಶೋಧನಾ ಸಮಿತಿಯು ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಂದ ಹೆಸರನ್ನು ಸಮಿತಿಯು ಶಿಫಾರಸು ಮಾಡುತ್ತದೆ. ನಂತರ ರಾಷ್ಟ್ರಪತಿಗಳು ಶಿಫಾರಸಿನ ಆಧಾರದ ಮೇಲೆ ಮುಂದಿನ ಸಿಇಸಿಯನ್ನು ನೇಮಕ ಮಾಡುತ್ತಾರೆ.
ರೇಸ್ ನಲ್ಲಿ ಜ್ಞಾನೇಶ್ ಕುಮಾರ್ ಮುಂದಿದ್ದಾರೆ
ರಾಜೀವ್ ಕುಮಾರ್ ನಂತರ ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಅಧಿಕಾರಾವಧಿ ಜನವರಿ 26, 2029 ರವರೆಗೆ ಇರುತ್ತದೆ. ಸುಖ್ಬೀರ್ ಸಿಂಗ್ ಸಂಧು ಅವರು ಮತ್ತೊಬ್ಬ ಚುನಾವಣಾ ಆಯುಕ್ತರಾಗಿದ್ದಾರೆ.
ಇಲ್ಲಿಯವರೆಗೆ, ಅತ್ಯಂತ ಹಿರಿಯ ಚುನಾವಣಾ ಆಯುಕ್ತರನ್ನು (ಇಸಿ) ಅಧಿಕಾರದಲ್ಲಿರುವವರ ನಿವೃತ್ತಿಯ ನಂತರ ಸಿಇಸಿಯಾಗಿ ಬಡ್ತಿ ನೀಡಲಾಯಿತು. ಆದಾಗ್ಯೂ, ಕಳೆದ ವರ್ಷ ಸಿಇಸಿ ಮತ್ತು ಇಸಿಗಳ ನೇಮಕಾತಿಗೆ ಸಂಬಂಧಿಸಿದ ಹೊಸ ಕಾನೂನು ಜಾರಿಗೆ ಬಂದ ನಂತರ, ಶೋಧನಾ ಸಮಿತಿಯು ಐದು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಹೆಸರುಗಳನ್ನು ಹುದ್ದೆಗಳ ನೇಮಕಾತಿಗಾಗಿ ಪ್ರಧಾನಿ ನೇತೃತ್ವದ ಸಮಿತಿಯ ಪರಿಗಣನೆಗೆ ಶಾರ್ಟ್ಲಿಸ್ಟ್ ಮಾಡುತ್ತದೆ.