ನವದೆಹಲಿ: ಅಮೆರಿಕದಿಂದ ಗಡೀಪಾರಾದ ಭಾರತೀಯರ ಮೂರನೇ ಬ್ಯಾಚ್ ಹೊತ್ತ ವಿಮಾನ ಇಂದು ಪಂಜಾಬ್ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿದೆ. ಅಮೆರಿಕಕ್ಕೆ ತೆರಳಿರುವ ಸುಮಾರು 157 ಅಕ್ರಮ ಭಾರತೀಯ ವಲಸಿಗರನ್ನು ಈ ವಿಮಾನದಲ್ಲಿ ವಾಪಸ್ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಇದಕ್ಕೂ ಮುನ್ನ ಶನಿವಾರ, 119 ಭಾರತೀಯರನ್ನು ಹೊತ್ತ ಯುಎಸ್ ವಿಮಾನ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಿತು.ಟ್ರಂಪ್ ಅವರ ಅಕ್ರಮ ವಲಸೆ ವಿರೋಧಿ ಅಭಿಯಾನದ ಭಾಗವಾಗಿ ಅಕ್ರಮ ಭಾರತೀಯ ವಲಸಿಗರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತಿದೆ. ಗಡಿಪಾರಾದವರಲ್ಲಿ 67 ಮಂದಿ ಪಂಜಾಬ್ ಮೂಲದವರಾಗಿದ್ದರೆ, 33 ಮಂದಿ ಹರಿಯಾಣದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಗುಜರಾತ್ನಿಂದ ಎಂಟು, ಉತ್ತರ ಪ್ರದೇಶದಿಂದ ಮೂರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಎರಡು, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಇದ್ದಾರೆ.
ವಿಮಾನ ಇಳಿಯುವ ಮೊದಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿಮಾನ ನಿಲ್ದಾಣಕ್ಕೆ ತಲುಪಿ ಗಡೀಪಾರುದಾರರಿಗೆ ಮಾಡಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಗಡೀಪಾರಾದವರನ್ನು ಅವರ ಊರಿಗೆ ಕರೆದೊಯ್ಯಲು ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಅವರು ಹೇಳಿದರು. “ನಮ್ಮ ವಾಹನಗಳು ಅವರನ್ನು ಅವರ ಸ್ಥಳಗಳಿಗೆ ಕರೆದೊಯ್ಯಲು ಸಿದ್ಧವಾಗಿವೆ” ಎಂದು ಮನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.