ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಶುಕ್ರವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದ ಈ ಪ್ರತಿಭಟನೆಯಲ್ಲಿ ಮೆಟ್ರೋ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಕೂಡಲೇ ದರ ಏರಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿದಂತೆ ಅನೇಕ ಹಿರಿಯ ಮುಖಂಡರು ಭಾಗಿಯಾಗಿದ್ದ ಈ ಪ್ರತಿಭಟನೆಯಲ್ಲಿ, ತಕ್ಷಣವೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ ಅವರು; ದರ ಏರಿಕೆ ವಾಪಸ್ ಪಡೆಯುವಂತೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಎರಡು ಸಲ ಮನವಿ ಸಲ್ಲಿಸಲಾಗಿದೆ. ಆದರೆ ಜನರ ಆಕ್ರೋಶ, ಭಾವನೆಗಳನ್ನು ಲೆಕ್ಕಿಸದೆ ನಮ್ಮ ಮನವಿಯನ್ನು ಕಡೆಗಣಿಸಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸಿದ್ದೇವೆ. ತಕ್ಷಣವೇ ದರ ಏರಿಕೆ ವಾಪಸ್ ಪಡೆಯದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ ನೀಡುತ್ತಿರುವ ಉಚಿತ ಕೊಡುಗೆಗಳಿಂದ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಖಜಾನೆಯಲ್ಲಿ ಹಣ ಇಲ್ಲ. ರಾಜ್ಯ ಸರಕಾರ ನೀಡುತ್ತಿರುವ ಚೆಕ್ ಗಳೇ ಬೌನ್ಸ್ ಆಗುತ್ತಿವೆ. ಅಲ್ಲಿಗೆ ಸರಕಾರದ ಆರ್ಥಿಕತೆ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಗಮನಿಸಬಹುದು. ಈ ಮುಜುಗರದಿಂದ ಪಾರಾಗಲು, ಸಂಪನ್ಮೂಲ ಕ್ರೋಢೀಕರಣ ಮಾಡಲು ಜನರ ಮೇಲೆ ಮೇಲಿಂದ ಮೇಲೆ ಹೊರೆ ಹೇರಿಕೆ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಸರಕಾರ ಬಂದ ಮೇಲೆ ₹41,360 ಕೋಟಿ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ವಿದ್ಯುತ್, ಇಂಧನ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಹೆಚ್ಚಳ, ಬಸ್ ಪ್ರಯಾಣ ದರ ಏರಿಕೆ ಸೇರಿದಂತೆ ಅನೇಕ ರೀತಿಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಇಲ್ಲಿ ಸುಲಿಗೆ ಮಾಡಿ ಅಲ್ಲಿ ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂದು ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬಹುಮತ ಕೊಟ್ಟು ಅಧಿಕಾರ ನೀಡಿದರು. ಆದರೆ, ಈ ಸರಕಾರ ನೋಡಿದರೆ ಬಹು ವಿಧದಲ್ಲಿ ಜನರನ್ನು ಲೂಟಿ ಮಾಡುತ್ತಿದೆ. ಕೂಡಲೇ ಮೆಟ್ರೋ ಏರಿಕೆ ಮಾಡಿರುವ ದರ ವಾಪಸ್ ಪಡೆಯದಿದ್ದರೆ ಜನರೇ ದಂಗೆ ಏಳಬೇಕಾಗುತ್ತದೆ ಎಂದು ರಮೇಶ್ ಗೌಡ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರಕಾರದ ಕೆಟ್ಟ ನೀತಿಗಳಿಂದ ರಾಜ್ಯದ ಜನರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಚುನಾವಣೆ ನಡೆದರೆ ಆ ಪಕ್ಷಕ್ಕೆ ಐವತ್ತು ಸ್ಥಾನ ಬರುವುದಿಲ್ಲ. ಜನ ರೋಸಿ ಹೋಗಿದ್ದಾರೆ. ಮೆಟ್ರೋ ರೈಲು ಡೀಸೆಲ್, ಪೆಟ್ರೋಲ್ ನಿಂದ ನಡೆಯುವುದಿಲ್ಲ. ವಿದ್ಯುತ್ ನಿಂದ ನಡೆಯುತ್ತದೆ. ಈಗಾಗಲೇ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ದುಬಾರಿ ದರದಿಂದ ಈಗಾಗಲೇ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ತೊರೆದಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ ಅನುಷ್ಠಾನಕ್ಕೆ ಬಂದ ಈ ಯೋಜನೆ ತನ್ನ ಮೂಲ ಆಶಯವನ್ನೇ ಮರೆತು ವರ್ತನೆ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.
ಜೆಡಿಎಸ್ ರಾಜ್ಯ ವಕ್ತಾರ ಹೆಚ್.ಎನ್.ದೇವರಾಜು, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ತಿಮ್ಮೇಗೌಡ, ನಗರ ಘಟಕದ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣ ಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್, ಕೇಂದ್ರ ಲೋಕಸಭಾ ಕ್ಷೇತ್ರ ಅಧ್ಯಕ್ಷ ನಾಗೇಶ್ವರ ರಾವ್, ದಕ್ಷಿಣ ಲೋಕಸಭಾ ಅಧ್ಯಕ್ಷ ತುಳಸೀ ರಾಮ್, ನಗರ ಅಲ್ಪಸಂಖ್ಯಾತ ಅಧ್ಯಕ್ಷ ಅಫ್ರೋಜ್ ಬೇಗ್ ಹಾಗೂ ಬೆಂಗಳೂರು ನಗರ ಕ್ಷೇತ್ರದ ಅಧ್ಯಕ್ಷರು ಉಪಸ್ಥಿತರಿದ್ದರು.
ಡಿಕೆಶಿ ರೀತಿ ನನಗೂ ಅವಕಾಶ ನೀಡಿ: ‘ಕಾಂಗ್ರೆಸ್ ಹೈಕಮಾಂಡ್’ಗೆ ‘ಸಚಿವ ಸತೀಶ್ ಜಾರಕಿಹೊಳಿ’ ಮನವಿ?
KNN Special Story: ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಉದ್ಘಾಟನೆಗೆ ಸಿದ್ಧ: ಹೀಗಿದೆ ವಿಶೇಷತೆ