ಚಿಕ್ಕಮಗಳೂರು: ಮೂಡಿಗೆರೆ ಸರ್ವೆ ಅಧಿಕಾರಿ ಶಿವಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸರ್ವೇ ಅಧಿಕಾರಿ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ.
ಸರ್ವೆ ಅಧಿಕಾರಿ ಶಿವಕುಮಾರ್ ಅವರು ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಮೂವರು ಕಾರಣ ಎಂದು ಬರೆದಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದಾಗಿ ಬರೆದಿದ್ದಾರೆ. ಹನಿಟ್ರ್ಯಾಪ್, ಕಿರುಕುಳ, ಬ್ಲ್ಯಾಕ್ ಮೇಲ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತನ್ನ ಸಾವಿಗೆ ಮೂವರು ಕಾರಣ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದಲ್ಲಿ ಸರ್ವೇ ಅಧಿಕಾರಿ ಶಿವಕುಮಾರ್(45) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಡಿಗೆರೆಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಗುಬ್ಬಿ ಮೂಲದ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಡಿಗೆರೆಯಲ್ಲಿ ಸರ್ವೆ ಅಧಿಕಾರಿಯಾಗಿ ಮೃತ ಶಿವಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಚಿಕ್ಕಮಗಳೂರು ನೌಕರರ ಸಂಘದ ನಿರ್ದೇಶಕರಾಗಿದ್ದರು. ಸರ್ವೆ ಅಧಿಕಾರಿ ಶಿವಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.