ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಂತನಹಳ್ಳಿ ಗ್ರಾಮದಲ್ಲಿ ಮರಗಳ ಮಾರಣಹೋಮವೇ ನಡೆದಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯ ನಂತ್ರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಈ ಆದೇಶದಂತೆ ತನಿಖಾ ವರದಿಯನ್ನು ಡಿಎಫ್ಓ ಸಿದ್ಧಪಡಿಸಿದ್ದು, ಸಲ್ಲಿಕೆ ಮಾತ್ರವೇ ಬಾಕಿ ಇದೆ. ವರದಿ ಸಲ್ಲಿಕೆಯಾದ ನಂತ್ರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗೋದು ಗ್ಯಾರಂಟಿ ಎನ್ನಲಾಗುತ್ತಿದೆ.
ದಿನಾಂಕ 24-01-2025ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅದರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಕಂತನಹಳ್ಳಿ ಗ್ರಾಮದ ಸರ್ವೆ ನಂಂಬರ್ 8ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದೆ ಎಂಬ ಸಚಿತ್ರ ದೂರು ಕಚೇರಿಗೆ ಬಂದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದರು.
ಕಂತನಹಳ್ಳಿ ಸನಂ 8ರಲ್ಲಿ ಒಟ್ಟು 533 ಎಕರೆ ಅರಣ್ಯವಿದ್ದು, ಇದರ ಪಕ್ಕದಲ್ಲೇ ಸಾರಮರೂರು ಗ್ರಾಮದ ಸನಂ 27 ರಲ್ಲಿ 352 ಎಕರೆ ಅರಣ್ಯವಿದೆ. ಇಲ್ಲಿ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದೆ. ಮರಗಳನ್ನು ಅಕ್ರಮವಾಗಿ ಕಡಿದು ಉರುಳಿಸಲಾಗುತ್ತಿದೆ. 80ಕ್ಕೂ ಹೆಚ್ಚು ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮರಗಳ ಅಕ್ರಮ ಕಡಿತಲೆ ಆಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪರಿಶೀಲಿಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮತ್ತು ನಿರ್ಲಕ್ಷ್ಯ ವಹಿಸಿರುವ ವಲಯದ ಅರಣ್ಯ ಅಧಿಕಾರಿ/ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲು ಸೂಚಿಸಿದ್ದರು.
ಸೊರಬದ ಕಂತನಹಳ್ಳಿಯಲ್ಲಿ ಅಕ್ರಮ ಮರ ಕಡಿತಲೆ ಮಾಡಿದ ‘ಮೂವರು ಅರೆಸ್ಟ್’
ಅರಣ್ಯ ಸಚಿವರ ಸೂಚನೆ ಬೆನ್ನಲ್ಲೇ ಎಚ್ಚತ್ತಿದ್ದಂತ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಂತನಹಳ್ಳಿ ಗ್ರಾಮದ ಸ.ನಂ:08 ರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಪ್ರಕರಣ ಸಂಬಂಧ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಮೂವರನ್ನು ಬಂಧಿಸಿದ್ದರು.
ಈ ಬಗ್ಗೆ ಸೊರಬ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷ ಅಂಗಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ, ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೆರೆಗೆ ಸೊರಬ ವಲಯದ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ದಾಳಿ ನೆಡಸಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಮರ ಕಡಿತಲೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಸ್ಥಳದಲ್ಲೆ 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದರು.
1ನೇ ಆರೋಪಿಯಾದ ಕೃಷ್ಣಮೂರ್ತಿ ಬಿನ್ ಶ್ರೀಕಾಂತ್ ಗುಂಜನೂರು ಗ್ರಾಮ ಸೊರಬ (ತಾ), 2ನೇ ಆರೋಪಿಯಾದ ಅನೀಲ್ ಕುಮಾರ್ ಬಿನ್ ಚಂದ್ರಪ್ಪ ಗುಂಜನೂರು ಗ್ರಾಮ ಸೊರಬ (ತಾ) ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದೆ. ಸದರಿ ಬಂಧಿತರು ನೀಡಿದ ಮಾಹಿತಿಯ ಮೇರೆಗೆ ಮತ್ತೋರ್ವ 03 ನೇ ಆರೋಪಿಯಾದ ಪುಟ್ಟರಾಜ ಗೌಡ ಬಿನ್ ಬಾಲಚಂದ್ರ ಗುಂಜನೂರು ಗ್ರಾಮ ಸೊರಬ (ತಾ), ಜೆ.ಎಂ.ಎಪ್,ಸಿ ವ್ಯವಹಾರಿಕ ನ್ಯಾಯಾಲಯ ಸೊರಬರಿಂದ ಅನುಮತಿ ಪಡೆದು ಸದರಿಯವರ ಮೇಲೆ ಅರಣ್ಯ ಮೊಕದ್ದಮೆ ಸಂಖ್ಯೆ:40/2024-25 ದಿನಾಂಕ:23.01.2025 ಅನ್ನು ದಾಖಲಿಸಿ. ಬಂದಿತರಿಂದ 02 ಮರ ಕುಯ್ಯುವ ಯಂತ್ರಗಳನ್ನು ಹಾಗೂ 22 ನಾಟಾ ತುಂಡುಗಳಿಂದ=2.976 ಅಂದಾಂಜು ಮೊತ್ತ ರೂ. 47,000 ಹಾಗೂ ಸೌದೆ= 5.000ಎಂ3 ಅಂದಾಜು ಮೊತ್ತ ರೂ. 3,000 ಒಟ್ಟು ಮೊತ್ತ ರೂ. 50,000 ಇಲಾಖಾ ಪರ ಜಪ್ತು ಪಡಿಸಲಾಗಿರುತ್ತದೆ ಎಂದಿದ್ದರು.
ತನಿಖಾ ವರದಿ ಸಿದ್ಧ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಫಿಕ್ಸ್
ಇನ್ನೂ ಸೊರಬ ತಾಲ್ಲೂಕಿನ ಕಂತನಹಳ್ಳಿ ಗ್ರಾಮ ಸರ್ವೆ ನಂ.8ರಲ್ಲಿ ನಡೆದಿರುವಂತ ಅಕ್ರಮ ಮರಗಳ ಮಾರಣಹೋಮದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶವನ್ನು ಗಂಭೀರವಾಗಿ ಪರಿಗಣಿಸಿರುವಂತ ಶಿವಮೊಗ್ಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ತನಿಖೆಗೆ ಸಾಗರ-ಸೊರಬ ಡಿಎಫ್ಓಗೆ ತಿಳಿಸಿದ್ದರು.
ಸಾಗರ-ಸೊರಬ ವಲಯದ ಡಿಎಫ್ಓ ಮೋಹನ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸೊರಬದ ಕಂತನಹಳ್ಳಿ ಸರ್ವೆ ನಂ.8ರ ಅಕ್ರಮ ಮರ ಕಡಿತಲೆ ಬಗ್ಗೆ ತನಿಖೆ ನಡೆಸಲಾಗಿದೆ. ವರದಿ ಸಿದ್ಧಪಡಿಸಲಾಗಿದ್ದು, ಸಲ್ಲಿಕೆ ಮಾತ್ರವೇ ಬಾಕಿ ಇದೆ ಅಂತ ತಿಳಿಸಿದ್ದಾರೆ. ಈ ತನಿಖಾ ವರದಿ ಸಲ್ಲಿಕೆಯ ನಂತ್ರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗೋದು ಫಿಕ್ಸ್ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ಏನಿದು ಮರಗಳ ಮಾರಣಹೋಮದ ಕತೆ?
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಸಬಾ ಹೋಬಳಿ, ಗುಡವಿ ಗ್ರಾಪಂ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಪಾರಂಪರಿಕ ಕಾಡಿಗೆ ದುಷ್ಕರ್ಮಿಗಳು ಲಗ್ಗೆ ಹಾಕಿದ್ದು ಅಪಾರ ಪ್ರಮಾಣದ ಮರಮಟ್ಟುಗಳ ಮಾರಣ ಹೋಮವಾಗಿದೆ. ಕಂತನಹಳ್ಳಿ ಸನಂ ೮ರಲ್ಲಿ ಒಟ್ಟು 533 ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸನಂ 27 ರಲ್ಲಿ 352 ಎಕರೆ ಅರಣ್ಯವಿದೆ. ಪ್ರಸ್ತುತ ಈ ಸನಂ ಗೆ ತಾಗಿಕೊಂಡು ಕೆಲ ಖಾಸಗಿ ಅಸ್ತಿಯೂ ಇದೆ. ಇದೇ ಸನಂ ನಲ್ಲಿ ಸುಮಾರು 15 ಎಕರೆ ಅತಿಕ್ರಮಣವೂ ಆಗಿದೆ.
ಇಲ್ಲಿ ಒತ್ತೂವರಿ ಅಥವಾ ಅತಿಕ್ರಮಣಕ್ಕಾಗಿ ನಾಶಪಡಿಸಲು ಸಜ್ಜು ನಡೆಯುತ್ತಿದ್ದಂತೆ ಗೋಚರಿಸುತ್ತಿದ್ದು ಬೆಲೆ ಬಾಳುವ ಮರಗಳನ್ನು ಕಟ್ಟಿಗೆ ಮಾಡಲು ಕತ್ತರಿಸಲಾಗಿದೆ. ಬೃಹತ್ ಪೈಕಸ್ ಮರವನ್ನು ಧರೆಗುರುಳಿಸಿದ್ದು ಸಾವಿರಾರು ಪಕ್ಷಿಗಳ ಆವಾಸ, ಆಹಾರಕ್ಕೆ ಕುತ್ತು ತರಲಾಗಿದೆ. ನೂರಾರು ಪಕ್ಷಿಗಳ ಮೊಟ್ಟೆ, ಮರಿಗಳು ಅಸು ನೀಗಿವೆ.
ಈಗ ಕಡಿದುರುಳಿಸಿರುವ ೮೦ಕ್ಕೂ ಹೆಚ್ಚು ಮರಗಳು ಐದಾರು ಎಕರೆ ವಿಸ್ತೀರ್ಣದಲ್ಲಿದ್ದು ಬೆಲೆಬಾಳುವ ಪಾರಂಪರಿಕ ಮರಗಳಾಗಿವೆ. ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ವೇಳೆ ಸಾವಿರಾರು ಮುಂಪೀಳಿಗೆ ಸಸ್ಯಗಳು ನಾಶಗೊಂಡಿವೆ.
ಈ ಅತಿಕ್ರಮಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದ್ದು ಅರಣ್ಯ ಇಲಾಖೆ ಬಾಯಿ ಮುಚ್ಚಿಸಿ ಪ್ರಕರಣವನ್ನು ತಿರುಚಲಾಗುತ್ತಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬಂದಿದೆ. ಮುಖ್ಯವಾಗಿ ಇದು ನಿರ್ಜನ ಪ್ರದೇಶವೇನಲ್ಲ, ವಾಹನ ಓಡಾಡುವ ರಸ್ತೆ ವ್ಯವಸ್ಥೆ ಇರುವ ಇಲ್ಲಿ ಏನೆ ಚಟುವಟಿಕೆ ನಡೆದರೂ ಗಮನಕ್ಕೆ ಬರುವಂತಿದೆ. ಆದಾಗ್ಯೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಪ್ರಶ್ನಾರ್ಹ ಎನ್ನುತ್ತಾರೆ ಸ್ಥಳೀಯರು.
ಒಂದುವರ್ಷದ ಈಚೆಗೆ ಸೊರಬದಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗಿದ್ದು ಚಂದ್ರಗುತ್ತಿ ಹೋಬಳಿಯಲ್ಲಿ ಅತಿ ಹೆಚ್ಚು, ಕಸಬಾ, ಉಳವಿ, ಕುಪ್ಪಗಡ್ಡೆ, ಜಡೆ ಭಾಗದಲ್ಲಿ ಒಂದಿಷ್ಟು ಕಾಡು ಅತಿಕ್ರಮಣ, ಮರಗಳ ನಾಶ ಪ್ರಕರಣ ಕಂಡುಬಂದಿದೆ. ಸಾಲದೆಂಬಂತೆ ಚಂದ್ರಗುತ್ತಿ ಭಾಗದಲ್ಲಿ ಅವ್ಯಾಹತ ಅನಧಿಕೃತ ಮರಳು ದಂಧೆಯೂ ನಡೆಯುತ್ತಿದೆ.
ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಇನ್ನೂ ಅನೇಕ ಕಡೆ ಅರಣ್ಯ ನಾಶವಾದ ಬಳಿಕ ಇದೀಗ ಕಂತನಹಳ್ಳಿ ಗ್ರಾಮದ ಸನಂ 8ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದ್ದು ಪರಿಸರಕ್ಕೆ ತುಂಬಲಾರದ ನಷ್ಟವಾಗಿದೆ. ಅರಣ್ಯ ಘಾತುಕರು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುವಲ್ಲಿ ಅರಣ್ಯ ಇಲಾಖೆಯೆ ಸಹಕರಿಸುತ್ತಿದೆಯಾ ಎಂಬ ಅನುಮಾನ ಕಾಣಿಸುತ್ತಿದೆ.
ಕೃಷಿ ಜಮೀನುಗಳು ಲೇಔಟ್ ಗಳಾಗಿ, ಅರಣ್ಯ ಭೂಮಿ ವಾಣಿಜ್ಯ ಬೆಳೆಗಾಗಿ ಪರಿವರ್ತನೆ ಹೊಂದುತ್ತಿರುವ ಸೊರಬದಲ್ಲಿ ಬಹುತೇಕ ಇನ್ನು ಮುಂದೆ ನೀರಿನ ಅಭಾವದ ಜೊತೆಗೆ ಆಹಾರ ಬೆಳೆಗಳು ಸಂಪೂರ್ಣ ಕಾಣೆಯಾಗಲಿದೆ ಎಂದು ಪರಿಸರಾಸಕ್ತ ಅನೇಕ ಅಧ್ಯಯನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡನೆ | New Income Tax Bill
BREAKING: ಪ್ರಯಾಣಿಕರ ಒತ್ತಡಕ್ಕೆ ಮಣಿದ BMRCL: ‘ನಮ್ಮ ಮೆಟ್ರೋ ದರ’ ಇಳಿಕೆಗೆ ನಿರ್ಧಾರ | Namma Metro