ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಸಿದ್ದು ನಾವಲ್ಲ. ಅದಕ್ಕಾಗಿಯೇ ಇರುವಂತ ಸಮಿತಿಯಾಗಿದೆ. ಬಿಜೆಪಿಯರು ಸುಖಾ ಸುಮ್ಮನೇ ನಮ್ಮ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಇಂದು ಮೆಟ್ರೋ ಟಿಕೆಟ್ ದರ ಏರಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ರಾಜಕೀಯ ಹೊರತಾಗಿ ಬೇರೇನೂ ಗೊತ್ತಿಲ್ಲ. ಯಾರು ಬೇಕಾದರೂ ಸಂಸತ್ತಿನಲ್ಲಿ ಮಾತನಾಡಲಿ, ಇಲ್ಲಿ ಪ್ರತಿಭಟನೆ ಮಾಡಲಿ, ಗಲಾಟೆ ಮಾಡಲಿ. ಆದರೆ ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಶೇ 50:50 ಅನುಪಾತದಲ್ಲಿ ಮಾಡಲಾಗಿರುತ್ತದೆ. ದರ ಏರಿಕೆಗೆ ಒಂದು ಸಮಿತಿ ಮಾಡಲಾಗಿದೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ಮಾಡಿರುತ್ತಾರೆ. ಆ ಸಮಿತಿಯ ತೀರ್ಮಾನ ನಮ್ಮ ಗಮನಕ್ಕೂ ಬರುವುದಿಲ್ಲ. ದರ ಏರಿಕೆ ತೀರ್ಮಾನ ಅವರು ಮಾಡುತ್ತಾರೆ” ಎಂದರು.
“ಡಬಲ್ ಡೆಕ್ಕರ್ ಸೇರಿದಂತೆ ಬೆಂಗಳೂರಿನ ಮೆಟ್ರೋವನ್ನು ಇನ್ನೂ ಹೆಚ್ಚಿನ ಭಾಗಕ್ಕೆ ವಿಸ್ತರಣೆ ಮಾಡಬೇಕಿದೆ. ಮೆಟ್ರೋ ಜೊತೆಗೆ ಮೇಲ್ಸೆತುವೆ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಶೇ 50 ರಷ್ಟು ವೆಚ್ಚವನ್ನು ಭರಿಸುವುದಾಗಿ ನಾವು ತಿಳಿಸಿದ್ದೇವೆ. ಏಕೆಂದರೆ ರಸ್ತೆ ವಿಸ್ತರಣೆ ಮಾಡಬೇಕು ಎಂದರೆ ಭೂಸ್ವಾಧಿನಕ್ಕೆ ಹೆಚ್ಚು ಖರ್ಚು ಆಗುತ್ತದೆ. ಕಟ್ಟಡಗಳನ್ನು ಒಡೆದುಹಾಕಿ ರಸ್ತೆ ವಿಸ್ತರಿಸುವುದು ಹೆಚ್ಚು ತ್ರಾಸದಾಯಕ. ಇದನ್ನು ಪ್ರಾಯೋಗಿಕವಾಗಿ ರಾಗಿಗುಡ್ಡ ಜಂಕ್ಷನ್ ಬಳಿ ಮಾಡಿದ್ದೇವೆ” ಎಂದು ತಿಳಿಸಿದರು.
“ನೀರಿನ ದರ ಏರಿಕೆ ಮಾಡಿ 14 ವರ್ಷವಾಗಿದೆ. ಅದಕ್ಕೆ ಲೀಟರ್ ಗೆ 1 ಪೈಸೆಯಷ್ಟು ದರ ಏರಿಕೆ ಪ್ರಸ್ತಾವನೆ ನನ್ನ ಮುಂದೆ ಬಂದಿದೆ. ಪರಿಶೀಲನೆ ಮಾಡಿ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.
ಸಣ್ಣ ಕೈಗಾರಿಕೆ, ಉದ್ಯಮಗಳಿಗೂ ಪ್ರೋತ್ಸಾಹ
ಇನ್ವೆಸ್ಟ್ ಕರ್ನಾಟಕ 2025 ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸ್ಥಳೀಯವಾಗಿ ರೊಟ್ಟಿ, ಖಾರದ ಪುಡಿ ಸೇರಿದಂತೆ ಆಹಾರ ಉತ್ಪನ್ನಗಳು, ಇತರೇ ಸಣ್ಣ ಕೈಗಾರಿಕೆಳಿಗೆ ಆರ್ಥಿಕವಾಗಿ ಶಕ್ತಿ ನೀಡುವುದು ನಮ್ಮ ಜವಾಬ್ದಾರಿ. ಸರ್ಕಾರ ನೀಡಿದ ಸಹಾಯಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಅಷ್ಟೇ. ಅವರು ಬದುಕಬೇಕು ರಾಜ್ಯವೂ ಬದುಕಬೇಕು” ಎಂದರು.
ದೊಡ್ಡ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಂತೆ ಸಣ್ಣ ಪ್ರಮಾಣದ ಗೃಹ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಇದರಿಂದ ಪ್ರತಿ ಊರಿನಲ್ಲೂ 50 ರಿಂದ 100 ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.