ಬೆಂಗಳೂರು : ಇಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ವಿಜಯಪುರ ಜಿಲ್ಲೆಯು ಯಶಸ್ವಿಯಾಗಿದೆ.
ʼನವೀಕರಿಸಬಹುದಾದ ಇಂಧನ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ವಲಯದಲ್ಲಿನ ಎರಡು ಪ್ರಮುಖ ಯೋಜನೆಗಳು ವಿಜಯಪುರ ಜಿಲ್ಲೆಯಲ್ಲಿ ಕಾರ್ಯಗತಗೊಳ್ಳಲಿವೆ. ಇದರಿಂದ ಈ ಪ್ರದೇಶದಲ್ಲಿ ಆರ್ಥಿಕ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿದ್ದು, ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ವಿಜಯಪುರದಲ್ಲಿ 3000 ಮೆಗಾವಾಟ್ ಸಾಮರ್ಥ್ಯದ ಗಾಳಿ ವಿದ್ಯುತ್ ಉತ್ಪಾದನೆ ಅಭಿವೃದ್ಧಿಪಡಿಸಲು ಮತ್ತು ಅತ್ಯಾಧುನಿಕ ವಿಂಡ್ ಟರ್ಬೈನ್ ಬ್ಲೇಡ್ ತಯಾರಿಕಾ ಘಟಕ ಸ್ಥಾಪಿಸಲು ಸುಜ್ಲಾನ್ ಕಂಪನಿಯು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಉಪಕ್ರಮವು, ಗಾಳಿ ವಿದ್ಯುತ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಭಾರತವನ್ನು ಅಭಿವೃದ್ಧಿಪಡಿಸಲು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಮತ್ತು ಸುಸ್ಥಿರತೆ ಸಾಧಿಸಲು ನೆರವಾಗಲಿದೆ.
ವಿಜಯಪುರ ಅಥವಾ ಕಲಬುರಗಿಯಲ್ಲಿ ಪ್ರತಿ ದಿನ 800 ಟನ್ ಸಾಮರ್ಥ್ಯದ ಬಹುಬಗೆಯ ಬೇಳೆಕಾಳು ಸಂಸ್ಕರಣಾ ಘಟಕ ಸ್ಥಾಪಿಸಲು ವಿಂಗ್ಸ್- ವಿಟೆರಾ ಕಂಪನಿಯು ₹ 250 ಕೋಟಿ ಬಂಡವಾಳ ತೊಡಗಿಸಲಿದೆ. ಈ ಘಟಕವು ಕಾರ್ಯಾರಂಭ ಮಾಡಿದ 2ನೇ ವರ್ಷದಿಂದ ₹ 800 ಕೋಟಿ ವಾರ್ಷಿಕ ವಹಿವಾಟು ನಡೆಸಲಿದೆ. ದಕ್ಷಿಣ ಭಾರತದಲ್ಲಿನ ಬೇಳೆಕಾಳುಗಳ ಅತಿದೊಡ್ಡ ಸಂಸ್ಕರಣಾ ಘಟಕ ಇದಾಗಿರಲಿದೆ.
ಈ ಉದ್ದೇಶಿತ ಘಟಕವು ಸ್ಥಳೀಯ ಉದ್ಯೋಗ ಅವಕಾಶ ಹೆಚ್ಚಳ, ಮಹಿಳೆಯರ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕ ಪ್ರಗತಿಗೆ ಗಣನೀಯ ಕೊಡುಗೆ ನೀಡಲಿದೆ. ಕಂಪನಿಯು ಪ್ರತ್ಯೇಕ ಸಂಗ್ರಹಣಾ ಕೇಂದ್ರ ತೆರೆಯಲಿರುವುದರಿಂದ ಬೆಳೆಗಾರರಿಗೆ ಉತ್ಪನ್ನಗಳ ಮಾರಾಟ ಸುಗಮಗೊಳಿಸಿ ಹೆಚ್ಚಿನ ಆದಾಯ ಪಡೆಯಲು ನೆರವಾಗಲಿದೆ.
ಇದರಿಂದ ಆಯ್ದ ಬೆಳೆಗಳ ಸಾಗುವಳಿ ಹೆಚ್ಚಿಸಲು ರೈತರಿಗೆ ಉತ್ತೇಜನ ದೊರೆಯಲಿದೆ. ಬೇಳೆಕಾಳುಗಳ ಆಮದು ಮೇಲಿನ ದೇಶದ ಅವಲಂಬನೆ ತಪ್ಪಿಸಲಿದೆ. ಕೃಷಿ ಸ್ವಾವಲಂಬನೆಗೆ ಉತ್ತೇಜನ ಸಿಗಲಿದೆ.
ಕಾರ್ಮಿಕರ ಕುಶಲತೆ ಹೆಚ್ಚಿಸಲು ಮತ್ತು ಉದ್ಯೋಗ ಅವಕಾಶ ಹೆಚ್ಚಿಸುವ ತನ್ನ ಬದ್ಧತೆಯ ಭಾಗವಾಗಿ ಸುಜ್ಲಾನ್, ಶೇ 90ರಷ್ಟು ಉದ್ಯೋಗಿಗಳಲ್ಲಿ ಐಟಿಐ ಪದವೀಧರರನ್ನು ನೇಮಿಸಿಕೊಳ್ಳಲಿದೆ. ವೃತ್ತಿ ಪರಿಣತಿ ಹೆಚ್ಚಿಸಲು ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪರಿಣತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಈ ಹೂಡಿಕೆ ಉಪಕ್ರಮಗಳ ಫಲವಾಗಿ ವಿಜಯಪುರ ಜಿಲ್ಲೆಯು ರಾಜ್ಯದ ಕೈಗಾರಿಕಾ ಹಾಗೂ ಕೃಷಿ ಪ್ರಗತಿಯನ್ನು ಮುನ್ನಡೆಸಲಿದೆ. ಪ್ರಾದೇಶಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ರಾಜ್ಯದ ಬದ್ಧತೆಯನ್ನೂ ಈ ಒಪ್ಪಂದಗಳು ಪುನರುಚ್ಚರಿಸಿವೆ.
ಶಿವಮೊಗ್ಗ: ಮಾರ್ಚ್ ಅಂತ್ಯದೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ- ಸಚಿವ ಮಧು ಬಂಗಾರಪ್ಪ
ರಾಜ್ಯದ ‘SC, ST ಸಮುದಾಯ’ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ‘ಉಚಿತ KAS Mains ತರಬೇತಿ’ಗೆ ಅರ್ಜಿ ಆಹ್ವಾನ
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಇನ್ನೆರಡು ದಿನಗಳಲ್ಲಿ ಸ್ಥಳ ಘೋಷಣೆ: ಡಿಸಿಎಂ ಡಿಕೆಶಿ