ನವದೆಹಲಿ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಮಧ್ಯಪ್ರದೇಶದಲ್ಲಿ ಸಂಬಂಧಿಕರೇ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಡೆದಿದೆ. ಯುವತಿಯ ಸಂಬಂಧಿಕರೇ ಆಕೆಯ ಮೇಲೆ ದೌರ್ಜನ್ಯ ಎಸಗಿದರು. ಈ ಅಪರಾಧದಲ್ಲಿ ಆರು ಜನರು ಭಾಗಿಯಾಗಿದ್ದರು. ಅವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
6 ಜನರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ 15 ಅಡಿ ಎತ್ತರದ ಟೆರೇಸ್‌ನಿಂದ ತಳ್ಳಿ ಹಾಕಲಾಯಿತು. ಸಂತ್ರಸ್ತೆಯ ಕಿರುಚಾಟ ಕೇಳಿ ಆಕೆಯ ಪೋಷಕರು ತಕ್ಷಣ ಹೊರಗೆ ಓಡಿ ಬಂದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು. ಆಕೆಯ ತಂದೆ ತಕ್ಷಣ 100 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅವರು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪರಿಸ್ಥಿತಿ ಹದಗೆಟ್ಟರೆ, ವೈದ್ಯಕೀಯ ಚಿಕಿತ್ಸೆಗಾಗಿ ಜಬಲ್ಪುರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.