ಬೆಂಗಳೂರು: ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಶೇ.47ರಷ್ಟು ದರವನ್ನು ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾದಂತೆ ಆಗಿದೆ. ಈ ದರವನ್ನು ಇಳಿಕೆ ಮಾಡದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಬೆಂಗಳೂರು ನಗರ ಘಟಕವು ಬಿಎಂಆರ್ ಸಿಎಲ್ ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.
ಇಂದು ಬಿಎಂಆರ್ ಸಿಎಲ್ ಗೆ ಪತ್ರ ಬರೆದಿರುವಂತ ಬೆಂಗಳೂರು ನಗರ ಬಿಜೆಪಿ ಘಟಕವು, ಮೆಟ್ರೋ ರೈಲು ಸಂಚಾರ ದರವನ್ನು ತೀವ್ರವಾಗಿ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ಜನತೆಗೆ ಬಹು ದೊಡ್ಡ ಆಘಾತವನ್ನು ನೀಡಿದೆ. ಬೆಂಗಳೂರು ನಗರದ ನಾಗರಿಕರ ಮೇಲೆ ಒಂದಾದ ಮೇಲೆ ಒಂದು ದರ ಏರಿಕೆಯ ಗದಾ ಪ್ರಹಾರ ರಾಜ್ಯ ಸರ್ಕಾರ ಮಾಡುತ್ತಿರುವುದು ಇವರ ಜನವಿರೋಧಿ ನೀತಿಯನ್ನು ಬಯಲು ಮಾಡಿದೆ ಎಂಬುದಾಗಿ ಕಿಡಿಕಾರಿದೆ.
ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನತೆಯು ಕೇವಲ ವಿವಿಧ ಸೇವೆಗಳ ದರ ಏರಿಕೆಯನ್ನು ಕಾಣುತ್ತಿದ್ದಾರೆಯೇ ವಿನಹ ಸೇವೆಯ ಗುಣಮಟ್ಟದಲ್ಲಿ ಮಾತ್ರ ಏರಿಕೆ ಕಾಣಲು ಸಾಧ್ಯವೇ ಆಗಿಲ್ಲ. ಸರ್ಕಾರ, ಸಾರಿಗೆ ದರ, ಪೆಟ್ರೋಲ್ ಡೀಸೆಲ್ ದರ, ಹೊಸ ವಾಹನ ಖರೀದಿಯ ಮೇಲೆ 1,000 ರೂ ಹೊಸ ಸೆಸ್ ಹೀಗೆ ಹತ್ತಾರು ಬೆಲೆಗಳನ್ನು ಹೆಚ್ಚಳ ಮಾಡಿ ನಗರದ ಜನರ ಜೀವನವನ್ನು ದುಸ್ತರ ಮಾಡಿದ್ದಾರೆ. ಈಗ ಮೆಟ್ರೊ ದರವು ಗಗನಕ್ಕೇರಿಸಿದ್ದಾರೆ ಎಂದು ಕಿಡಿಕಾರಿದೆ.
ಸಾಮೂಹಿಕ ಸಾರಿಗೆಯ ಜೀವನಾಡಿಯಾದ ಮೆಟ್ರೊ ರೈಲು ಸೇವೆಯ ದರವನ್ನು ಒಮ್ಮೆಗೆ ಶೇಕಡಾ 46ರಿಂದ 50ರಷ್ಟು ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡಿರುವುದು ಅಧಿಕಾರಸ್ಮರಿಗೆ ನಗರದ ಜನತೆಯ ಬವಣೆಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ.
ಸರ್ಕಾರ ನಗರ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ವಿಫಲವಾಗಿ ಜನರು ಪರದಾಡುತ್ತಿರುವಾಗ ಸಮೂಹ ಸಾರಿಗೆಯತ್ತ ಜನರನ್ನು ಸೆಳೆಯಲು ಸರ್ಕಾರ ಉತ್ತೇಜನಕರ ನೀತಿಯನ್ನು ಅಳವಡಿಸಿಕೊಳ್ಳಬೇಕು ಆದರೆ ಸರ್ಕಾರ ಮೆಟ್ರೊ ಸೇವೆಯಿಂದ ಜನರನ್ನು ವಿಮುಖಗೊಳಿಸುವ ನೀತಿಯನ್ನು ಅನುಸರಿಸುತ್ತಿದೆ ಶೋಚನೀಯ ಸಂಗತಿಯಾಗಿದೆ.
ಇದೀಗ ದೇಶದಲ್ಲೇ ಅತ್ಯಂತ ದುಬಾರಿಯಾದ ಮೆಟ್ರೋ ಸೇವೆಯನ್ನು ನೀಡುತ್ತಿರುವ ಕುಖ್ಯಾತಿಯು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುವಂತಾಗಿದೆ. ಉಚಿತ ಕೊಡುಗೆಗಳಿಂದ ಖಜಾನೆಯು ಖಾಲಿಯಾಗುತ್ತಿರುವ ಕಾರಣ ಆದಾಯ ಗಳಿಕೆಗೆ ಹೊಸ ಹೊಸ ಮೂಲಗಳ ಮೂಲಕ ನಗರದ ನಾಗರಿಕರ ಸುಲಿಗೆಗೆ ಸರ್ಕಾರ ಮುಂದಾಗಿರುವುದು ನಾಚಿಗೇಡಿನ ಸಂಗತಿ.
ದುರಾದೃಷ್ಟಕರ ಸಂಗತಿಯೆಂದರೆ ಮೆಟ್ರೊ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾಗಿ ಯೋಜನಾ ವೆಚ್ಚವು ದುಪ್ಪಟ್ಟಾಗಿದೆ.ದುಬಾರಿ ವೆಚ್ಚದಿಂದ ಮೆಟ್ರೊ ಯೋಜನೆಯು ಕಾರ್ಯಸಾಧುವಲ್ಲದ ಹಾಗೆ ನಿರ್ವಹಣೆ ಮಾಡುವ ದುರವಸ್ಥೆಯಾಗಿದೆ.
ಇವರ ಕಾರ್ಯ ವೈಖರಿಯ ಅದಕ್ಷತೆಗೆ ತಾಜಾ ಉದಾಹರಣೆಯು 18 ಕಿ.ಮಿ ಹಳದಿ ಮಾರ್ಗವು ಸಿದ್ಧವಾಗಿದ್ದರೂ ರೈಲು ಬೋಗಿಗಳು ಇಲ್ಲದೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಾಲೋಚನೆಯ ಕೊರತೆ ಹಾಗೂ ಸೂಕ್ತ ತಯಾರಿಯಿಲ್ಲದ ಕಾರಣ ಸಂಚಾರ ಆರಂಭಿಸಲು ಸಾಧ್ಯವಾಗದೆ ಮೆಟ್ರೊ ನಿಗಮವು ಕೋಟ್ಯಾಂತರ ರೂಪಾಯಿ ನಷ್ಟವನ್ನು ಅನುಭವಿಸುತ್ತಿದೆ. ನಿಗಮದ ಅಧಿಕಾರಿಗಳ ಅದಕ್ಷತೆಗೆ ನಗರದ ನಾಗರಿಕರು ದಂಡ ತೆರುತ್ತಿದ್ದಾರೆ. ಮೆಟ್ರೊ ಸೇವೆಯಲ್ಲಿ ವೃತ್ತಿಪರತೆ ಅಳವಡಿಸಿಕೊಂಡು ಕಾಲಬದ್ದ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
ನಗರದ ನಾಗರಿಕರನ್ನು ಸಮೂಹ ಸಾರಿಗೆ ಬಳಕೆಗೆ ಉತ್ತೇಜಿಸುವ ಕ್ರಮಗಳಿಗೆ ನಿಗಮ ಮುಂದಾಗಬೇಕು ಎಂದು ಒತ್ತಾಯಿಸುತ್ತೇವೆ. ನೂರಕ್ಕೆ ನೂರರಷ್ಟು ಪ್ರಯಾಣವನ್ನು ಹೆಚ್ಚಿಸಿ ನಮ್ಮ ಮೆಟ್ರೋ ದೇಶದಲ್ಲಿ ದುಬಾರಿ ಮೆಟ್ರೋ ಆಗಿದೆ ಸಾರ್ವಜನಿಕರು ಸಮೂಹ ಸಾರಿಗೆಯನ್ನು ಉಪಯೋಗಿಸಿಕೊಳ್ಳಬೇಕೆಂಬ ಈ ಉದ್ದೇಶದಿಂದ ಪ್ರಾರಂಭವಾದ ನಮ್ಮ ಮೆಟ್ರೋ ಈಗ ದುಬಾರಿ ಮೆಟ್ರೋ ಆಗಿದೆ.
ದೆಹಲಿ ಮುಂಬೈ ಹೈದರಾಬಾದ್ ಕೊಲ್ಕತ್ತಾ ಚೆನ್ನೈ ಈ ನಗರಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರಿನ ನಮ್ಮ ಮೆಟ್ರೋ ದುಬಾರಿ ದರವನ್ನು ಹೆಚ್ಚಿಸಿದೆ ದರ ಏರಿಕೆ ಯಾವುದೇ ವೈಜ್ಞಾನಿಕವಾಗಿ ಹೆಚ್ಚಿಸಿರುವ ದರವಲ್ಲ ಮೆಟ್ರೋದಲ್ಲಿ ಹಲವಾರು ವಿಭಾಗಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟುವ ಬದಲು ಪ್ರಯಾಣಿಕರಿಗೆ ಬರೆಯಾಗುವ ರೀತಿ ದರವನ್ನು ಹೆಚ್ಚಿಸುವುದು ಸೂಕ್ತವಲ್ಲ ಕಿಲೋಮಿಟರ್ ಆಧಾರದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ ಅದನ್ನು ಸ್ಟೇಷನ್ ಗಳಿಗೆ ಅನ್ವಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ 47ರಷ್ಟು ಹೆಚ್ಚಳ ಎಂದು ಹೇಳಿದರು ಹಲವು ಕಡೆಗಳಲ್ಲಿ ಇಂದಿನ ದರವನ್ನು ಹೋಲಿಕೆ ಮಾಡಿದಾಗ ಶೇಕಡ ನೂರರಷ್ಟು ದರವನ್ನು ಪ್ರಯಾಣಿಕರು ಬರಿಸಬೇಕಾಗುತ್ತದೆ ಕನಿಷ್ಠ ದರ 10 ರೂಪಾಯಿ ಇದ್ದುದ್ದನ್ನು ಹಾಗೆ ಉಳಿಸಿಕೊಂಡಿರುವ ಬಿಎಮ್‌ಆರ್‌ಸಿಎಲ್ ಗರಿಷ್ಠ ದರ 60 ಇದ್ದದ್ದನ್ನು 90ಕ್ಕೆ ಹೇರಿಕೆ ಮಾಡಿದೆ. ಚೆನ್ನೈ ಮುಂಬೈ ದೆಹಲಿ ಹೈದರಾಬಾದ್ ಕೋಲ್ಕತ್ತಾ ಮುಂತಾದ ಮಹಾನಗರ ಗಳಿಗಿಂತ ಬೆಂಗಳೂರು ಮೆಟ್ರೋ ಪ್ರಯಾಣಿಕರು ಶೇಕಡ 60ರಷ್ಟು ಅಧಿಕ ದರವನ್ನು ಮೆಟ್ರೋಗೆ ಬರಿಸಬೇಕಾಗಿದೆ.
ಮೆಟ್ರೊ ಸೇವೆಯ ದರದಲ್ಲಿ ಪೂರ್ವಾಪರ ಆಲೋಚಿಸಿದೆ ನಗರದ ನಾಗರಿಕರನ್ನು ಸುಲಿಗೆ ಮಾಡಲು ಕೈಗೊಂಡಿರುವ ಭಾರಿ ದರ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡಿಯಬೇಕು. ಬಿಜೆಪಿ ನಗರ ನಾಗರಿಕರನ್ನು ಸುಲಿಗೆ ಮಾಡಲು ಅವಕಾಶ ಕೊಡುವುದಿಲ್ಲ. ದರ ಏರಿಕೆ ಹಿಂಪಡೆಯದುದಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದೆ.
‘ಮುಡಾ’ ಹಗರಣ : 14 ಸೈಟ್ ಹಂಚಿಕೆಗೂ, ಭೈರತಿ ಸುರೇಶ್ ಗೂ ಯಾವುದೇ ಸಂಬಂಧವಿಲ್ಲ : ಸಿವಿ ನಾಗೇಶ್ ವಾದ ಮಂಡನೆ