ಬೆಂಗಳೂರು : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯವನ್ನು ಹೊರತುಪಡಿಸಿ ನನಗೆ ಅವರು ಹಿರಿಯ ಅಣ್ಣ ಇದ್ದ ಹಾಗೇ. ನಾನು ಆಗಾಗ್ಗೆ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಈ ವೇಳೆ ಕುಟುಂಬದ ವಿಚಾರಗಳನ್ನು ಮಾತಾಡುತ್ತೇವೆ. ಭೇಟಿಯಾದಾಗಲೆಲ್ಲ ರಾಜಕೀಯ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಭೇಟಿ ವೇಳೆಯು ಸಹ ಯಾವುದೇ ರಾಜಕೀಯ ಚರ್ಚೆಯನ್ನು ಮಾಡಿಲ್ಲ. ಕುಟುಂಬದ ಅನೇಕ ವಿಚಾರಗಳನ್ನು ಮಾತಾಡಿಕೊಂಡಿದ್ದೇವೆ. ಅದಕ್ಕೆ ಹೆಚ್ಚು ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಒಂದೇ ಒಂದು ಶಬ್ದವನ್ನು ರಾಜಕೀಯದ ಬಗ್ಗೆ ಮಾತಾಡಿಲ್ಲ ಎಂದು ಹೇಳಿದರು.
ದೆಹಲಿ ನಾಯಕರ ಭೇಟಿ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗುತ್ತೇನೆ. ಅದರಲ್ಲಿ ಏನು ತೊಂದರೆ ಇದೆ. ನಮ್ಮ ನಾಯಕರುಗಳನ್ನು ಭೇಟಿ ಮಾಡಿಕೊಂಡು ಬರುತ್ತೇನೆ. ಅದಕ್ಕೆ ಬೇರೆಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ವಿಚಾರದಲ್ಲಿ ಮುಚ್ಚುಮರೆ ಏನಿದೆ?. ರಾಜಕೀಯ ಚರ್ಚೆ ಮಾಡಿದ್ದರೆ, ಮಾಡಿರುವುದಾಗಿ ಹೇಳುತ್ತಿದ್ದೆ. ಏನು ಚರ್ಚೆ ಮಾಡಿದ್ದೇನೆ ಅಂತ ಹೇಳುತ್ತಿದ್ದೆನೇ? ನಾನು ರಾಜಕೀಯ ಚರ್ಚೆ ಮಾಡಿಲ್ಲ. ಒಂದು ವೇಳೆ ಚರ್ಚೆ ಮಾಡಿದ್ದರೆ ಏನು ಎಂಬುದನ್ನು ನಿಮ್ಮ ಮುಂದೆ ಹೇಳುತ್ತಿರಲಿಲ್ಲ ಎಂದರು.
ರಾಜ್ಯದ ತೆರಿಗೆ ಪಾಲು ಕೇಳಿದರೆ ಸಣ್ಣತನ ಎಂದಿರುವ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರಿಗೆ ನಾಚಿಕೆಯಾಗಬೇಕು. ಈ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ. ಸ್ವಲ್ಪ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಿಕೊಂಡರೆ ಒಳ್ಳೆಯದು. ಫೆಡರಲ್ ವ್ಯವಸ್ಥೆಯಲ್ಲಿ ತೆರಿಗೆ ಪಾಲು ಯಾವ ರೀತಿ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ನಿಯಮ ಮಾಡಿಟ್ಟಿದ್ದಾರೆ. ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕದವರಿಗೆ ಹೆಚ್ಚು ಪಾಲು ನೀಡುವಂತೆ ಕೇಳುತ್ತಿದ್ದೇವೆ ಎಂದರು.
ಅದಕ್ಕೆ ಗೋಯೆಲ್ ಅವರು ಸಣ್ಣತನ ಅಂತ ಹೇಳುತ್ತಾರೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ದಿವಾಳಿ ಆಗಿದೆ ಎಂದು ಹೇಳುತ್ತಾರೆ. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಆ ರೀತಿ ಮಾತನಾಡಬಾರದು. ಇದೆಲ್ಲ ರಾಜಕಾರಣದಲ್ಲಿ ಸರಿಯಲ್ಲ. ಒಂದು ವ್ಯವಸ್ಥೆ ಮಾಡಿಟ್ಟಿದ್ದಾರೆ. ಆ ವ್ಯವಸ್ಥೆಯಲ್ಲಿ ನಾವೆಲ್ಲ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಿಕೊಳ್ಳಲಿ. ಕೇಂದ್ರಕ್ಕೆ ಬಂದಿರುವ ತೆರಿಗೆ ಯಾರಿಗು ಕೊಡುವುದಿಲ್ಲ ಎಂದು ನಿಯಮ ಮಾಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದರು.
ಜಾತಿಗಣತಿ ವರದಿ ಜಾರಿಗೆ ಯಾರು ಅಡ್ಡಿಪಡಿಸಿಲ್ಲ. ಆಂತರಿಕವಾಗಿ ಇನ್ನೂ ಚರ್ಚೆಯಾಗಬೇಕಿದೆ. ನಂತರ ಹೊರಗೆ ತರಬೇಕು. ಮುಖ್ಯಮಂತ್ರಿಗಳು ಆರೋಗ್ಯದ ದೃಷ್ಟಿಯಿಂದ ಸಚಿವ ಸಂಪುಟ ಸಭೆಯನ್ನು ಮುಂದೂಡಿದ್ದಾರೆ. ಫೆ.17ರಂದು ಮಲೆಮಾದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಲು ನಿರ್ಧರಿಸಿದ್ದಾರೆ. ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಕುರಿತು ಹೇಳಿದ್ದಾರೆ ಎಂದು ಹೇಳಿದರು.
BREAKING : ಬೆಂಗಳೂರು ‘ಏರ್ ಶೋ-2025’ : ಪೊಲೀಸರಿಗೆ ನೀಡಿದ್ದ ಊಟದಲ್ಲಿ ನಿನ್ನೆ ಜಿರಳೆ ಇಂದು ಹುಳ ಪತ್ತೆ!