ಬೆಂಗಳೂರು: ಜೀತ ಪದ್ಧತಿ ಒಂದು ಅಮಾನುಷ ಕ್ರಿಯೆಯಾಗಿದ್ದು ಮನುಷ್ಯರು ನಾಚುವಂತಹ ಕೃತ್ಯವಾಗಿದೆ, ಜೀತ ಪದ್ಧತಿ ವಿರುದ್ಧ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಂಡ ನಂತರ ಇಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ಈಗಲೂ ಇಂತಹ ಪ್ರಕರಣಗಳು ಅಪರೂಪಕ್ಕೆ ನಡೆಯುತ್ತಿವೆ, ಸಂವಿಧಾನದ ಆಶಯಗಳಂತೆ ರಾಷ್ಟ್ರದ ಯಾವುದೇ ವ್ಯಕ್ತಿ ಸ್ವತಂತ್ರವಾಗಿ ಹಾಗೂ ಗೌರವಯುತವಾಗಿ ಬದುಕುವ ಹಕ್ಕನ್ನು ಪಡೆದಿರುತ್ತಾನೆ, ಜೀತ ಪದ್ಧತಿ ಆಚರಣೆ ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಮಾನವೀಯತೆಗೆ ಯಾವುದೇ ಅಸಹಾಯಕ ಸಿಲುಕದೇ ಇರುವಂತಹ ವಾತಾವರಣ ಸೃಷ್ಟಿಸಲು ಸರ್ಕಾರದ ಜೊತೆ ಸಮಾಜವೂ ಕೈಜೋಡಿಸಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನವನ್ನು ಇಂದು ಆಚರಿಸುತ್ತಿರುವ ಹಿನ್ನಲೆಯಲ್ಲಿ ನೀಡಿರುವ ಸಂದೇಶದಲ್ಲಿ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜೀತ ಪದ್ದತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂದು ಕೋರಿದ್ದಾರೆ.
ಜೀತ ಪದ್ಧತಿ ರದ್ಧತಿ ಕಾಯ್ದೆಯನ್ನು ದೇಶದಾದ್ಯಂತ ಜಾರಿಗೊಳಿಸಲಾಗಿದ್ದು, ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಫೆಬ್ರವರಿ 9ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ ದಿನವನ್ನು ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಜೀತ ವಿಮುಕ್ತರ ವಾಪಸ್ಸು, ಜೀತ ಕಾರ್ಮಿಕರಾಗದಂತೆ ತಡೆಗಟ್ಟಲು ಕೌಶಲ್ಯ ತರಬೇತಿ, ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ಜೀತ ವಿಮುಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ, ಪುರ್ನವಸತಿ ಹಾಗೂ ಜೀತ ಅಪರಾಧಗಳಲ್ಲಿ ತೆಗೆದುಕೊಳ್ಳುವ ಕ್ರಮಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನವನ್ನು ಹೊರತಂದಿದೆ. ಜೀತ ವಿಮುಕ್ತರಿಗೆ ತುರ್ತು ಪರಿಹಾರ ಅನುದಾನವಾಗಿ 30,000 ರೂ. ಗಳನ್ನು ಜಿಲ್ಲಾಧಿಕಾರಿಗಳು ನೀಡುತ್ತಾರೆ. ಜೀತ ವಿಮುಕ್ತರ ಸಹಾಯಧನ ಯೋಜನೆಯಡಿ 2000 ರೂ. ಮಾಸಾಶನವನ್ನು ಜಿಲ್ಲಾ ಪಂಚಾಯತಿಗಳ ಮೂಲಕ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
BREAKING : ಹುಬ್ಬಳ್ಳಿಯಲ್ಲಿ ನಟೋರಿಯಸ್ ರೌಡಿಶೀಟರ್ `ಸೈಂಟಿಸ್ಟ್ ಮಂಜ್ಯಾ’ ಸೇರಿ ಮೂವರು ಅರೆಸ್ಟ್.!