ನವದೆಹಲಿ: ಭಾರತೀಯ ನಾಗರಿಕರ ಭಾವನೆಗಳನ್ನು ನೋಯಿಸುವ “ರಾಷ್ಟ್ರ ವಿರೋಧಿ ಹೇಳಿಕೆಗಳನ್ನು” ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಮತ್ತು 197 (1) (ಡಿ) ಅಡಿಯಲ್ಲಿ ಒಡಿಶಾದ ಜಾರ್ಸುಗುಡ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಮ ಹರಿ ಪುಜಾರಿ ಮತ್ತು ಇತರರು ಸಲ್ಲಿಸಿದ ದೂರಿನ ಪ್ರಕಾರ, ಬಿಜೆಪಿ, ಬಿಜೆಪಿ ಯುವ ಮೋರ್ಚಾ, ಆರ್ಎಸ್ಎಸ್, ಬಜರಂಗದಳ ಮತ್ತು ಜಾರ್ಸುಗುಡದ ಬಿಜೆಪಿಯ ಕಾನೂನು ಘಟಕದ ಸದಸ್ಯರು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ವಿಧ್ವಂಸಕ ಚಟುವಟಿಕೆಗಳು ಮತ್ತು ರಾಜ್ಯದ ವಿರುದ್ಧ ದಂಗೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಗಳು ವಾಕ್ ಸ್ವಾತಂತ್ರ್ಯದ ಮಿತಿಗಳನ್ನು ಮೀರಿದೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸಿದೆ ಎಂದು ಎಫ್ಐಆರ್ ಹೇಳಿದೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜನವರಿ 15, 2025 ರಂದು ದೆಹಲಿಯ ಕೋಟ್ಲಾ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ಈ ವಿವಾದ ಹುಟ್ಟಿಕೊಂಡಿದೆ.
ತಮ್ಮ ಪಕ್ಷದ ಸಿದ್ಧಾಂತವು ಸಾವಿರಾರು ವರ್ಷಗಳಿಂದ ಆರ್ಎಸ್ಎಸ್ ಸಿದ್ಧಾಂತದೊಂದಿಗೆ ಸಂಘರ್ಷದಲ್ಲಿದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು. “ಬಿಜೆಪಿ ಮತ್ತು ಆರ್ಎಸ್ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಬಿಜೆಪಿ, ಆರ್ಎಸ್ಎಸ್ ಮತ್ತು ಭಾರತೀಯ ರಾಜ್ಯದ ವಿರುದ್ಧ ಹೋರಾಡುತ್ತಿದ್ದೇವೆ” ಎಂದಿದ್ದರು.