ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಯಾದ ಫಲಾನುಭವಿಗಳಿಗೆ ಡಿ.ಬಿ.ಟಿ. ಮೂಲಕ ಹಣ ಸಂದಾಯ ಮಾಡಲಾಗುತ್ತಿದೆ. ಅದೇ ರೀತಿ 2023-24ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲಮೋ ಅರ್ಹತೆ ಹೊಂದಿದವರು ಯುವನಿಧಿ ಯೋಜನೆಯ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಫೆ.15 ರವರೆಗೆ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಇರುವ ಪದವಿ ಕಾಲೇಜುಗಳು ಹಾಗೂ ಡಿಪ್ಲಮೋ ಕಾಲೇಜುಗಳು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶೇಷ ನೋಂದಣಿ ಕೌಂಟರ್ ತೆರೆಯಲಾಗಿದೆ. ಅಲ್ಲದೇ ಗ್ರಾಮ ಒನ್, ಕರ್ನಾಟಕ ಒನ್, ಚಿತ್ರದುರ್ಗ ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲೂ ನಿರಂತರವಾಗಿ ಯುವನಿಧಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.
ನಿರುದ್ಯೋಗಿ ಯುವಕ-ಯುವತಿಯರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗವನ್ನು ಪಡೆದುಕೊಂಡು, ಯುವನಿಧಿ ನೋಂದಣಿ ಮಾಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವೈಶಾಲಿ ಗೇಟ್, ಸ್ಟೇಡಿಯಂ ರೋಡ್, ಚಿತ್ರದುರ್ಗ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಡಿ.ರವೀಂದ್ರ ತಿಳಿಸಿದ್ದಾರೆ.