ಬೆಂಗಳೂರು: ಯಾವುದೇ ಧರ್ಮದ ಬಗ್ಗೆ ಶ್ರದ್ದೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ ಇವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಬುಧವಾರ ಉತ್ತರಿಸಿದರು.
ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಆರ್.ಅಶೋಕ್ ಅವರು ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ವಿರೋಧ ಪಕ್ಷದ ನಾಯಕ ಅಶೋಕ್ ಅವರ ಹೇಳಿಕೆಗೆ ಉತ್ತರಿಸಲು ನಾನು ಇಷ್ಟ ಪಡುವುದಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಧರ್ಮ, ನಮ್ಮ ಕರ್ಮ, ಆಚಾರ ವಿಚಾರ ಅನವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ. ನಮ್ಮ ಪಕ್ಷದ ನಾಯಕರು ಈ ವಿಚಾರವಾಗಿ ವಿಶಾಲಾರ್ಥದ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ, ಆಚರಣೆ, ನಂಬಿಕೆಗಳು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ವಿಚಾರವಲ್ಲ” ಎಂದು ಹೇಳಿದರು.
ನನ್ನ ವೈಯಕ್ತಿಕ ನಂಬಿಕೆ ವಿಚಾರವಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲ:
“ಗಂಗೆಯಾಗಲಿ, ಕಾವೇರಿಯಾಗಲಿ, ಕೃಷ್ಣಾ, ಅರ್ಕಾವತಿಯಾಗಲಿ. ನೀರಿಗೆ ಬಣ್ಣ, ರುಚಿ, ಆಕಾರವಿಲ್ಲ. ನೀರು ಎಲ್ಲರಿಗೂ ಬೇಕು. ಅವರು ಅಶೋಕ ಎಂದು ಯಾಕೆ ಹೆಸರಿಟ್ಟುಕೊಂಡಿದ್ದಾರೆ, ಕಲ್ಲು ಎಂದು ಹೆಸರು ಇಟ್ಟುಕೊಳ್ಳಬಹುದಿತ್ತಲ್ಲವೇ? ಅವರಿಗೆ ಏನು ಹೆಚ್ಚುಕಮ್ಮಿಯಾಗಿದೆಯೋ? ಅವರಲ್ಲಿ ಏನೋ ಸಮಸ್ಯೆ ಇರಬೇಕು. ನನ್ನ ವೈಯಕ್ತಿಕ ನಂಬಿಕೆ ವಿಚಾರವಾಗಿ ಮಾತನಾಡಲು ಯಾರಿಗೂ ಹಕ್ಕಿಲ್ಲ. ನನ್ನ ಭಕ್ತಿ, ನಂಬಿಕೆ ನನಗೆ ಬಿಟ್ಟ ವಿಚಾರ” ಎಂದು ತಿರುಗೇಟು ನೀಡಿದರು.
“ಪ್ರಪಂಚದಲ್ಲಿ ಹಲವಾರು ಧಾರ್ಮಿಕ ಆಚರಣೆ, ನಂಬಿಕೆಗಳಿವೆ. ನಾನು ನನ್ನ ದೇವರನ್ನು ನಂಬುತ್ತೇನೆ. ಕೆಲವರು ಹಸ್ತ ನೋಡಿಕೊಳುತ್ತಾರೆ, ಇನ್ನೂ ಕೆಲವರು ನೀರು, ಆಕಾಶ, ಸೂರ್ಯನನ್ನು ನಂಬುತ್ತಾರೆ. ಇದರಲ್ಲಿ ಸರಿ ತಪ್ಪು ಎಂಬುದಿಲ್ಲ, ಅವರವರ ನಂಬಿಕೆ ಅಷ್ಟೇ” ಎಂದರು.
ನನ್ನ ಹೆಸರು ಹೇಳಿದರೆ ಮಾತ್ರ ಕೆಲವರಿಗೆ ಮಾರ್ಕೆಟ್
“ತಮ್ಮ ಮನೆಯಲ್ಲಿರುವ ಗಲಾಟೆ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರಾ ಎಂದು ಕೇಳಿದಾಗ, “ಅವರಲ್ಲಿ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಅವರು ಟ್ವೀಟ್ ಆದರೂ ಮಾಡಲಿ, ಭಾಷಣವಾದರೂ ಮಾಡಲಿ ಅವರಿಗೆ ಉತ್ತರ ನೀಡಲು ನನಗೆ ಇಚ್ಛೆ ಇಲ್ಲ. ಕೆಲವರಿಗೆ ನನ್ನ ಹೆಸರು ಹೇಳದಿದ್ದರೆ ಮಾರ್ಕೆಟ್ ಇರುವುದಿಲ್ಲ. ನನ್ನ ಹೆಸರು ತೆಗೆದುಕೊಳ್ಳದಿದ್ದರೆ, ನಿದ್ದೆಯೂ ಬರುವುದಿಲ್ಲ, ಶಕ್ತಿಯೂ ಬರುವುದಿಲ್ಲ. ಉತ್ಸಾಹ, ಹುಮ್ಮಸ್ಸು ಬರುವುದಿಲ್ಲ” ಎಂದು ತಿಳಿಸಿದರು.
“ಕುಂಭಮೇಳಕ್ಕೆ ಹೋಗುವ ವಿಚಾರವಾಗಿ ಕೇಳಿದಾಗ, “ಆ ವಿಚಾರ ನನಗೆ ಬಿಟ್ಟದ್ದು, ನಾನು ಹೋಗುತ್ತೇನೋ, ಬಿಡುತ್ತೇನೋ ನನಗೆ ಬಿಟ್ಟ ವಿಚಾರ. ನಾನು ಪೂಜೆ ಮಾಡುವುದು, ಕುಂಕುಮ ಇಡುವುದು, ರುದ್ರಾಕ್ಷಿ ಧರಿಸುವುದು ನನ್ನ ಇಚ್ಛೆ. ಕೆಲವರು ಸೂಟು ಬೂಟು ಹಾಕಿದರೆ, ಮತ್ತೆ ಕೆಲವರು ಪಂಚೆ ಹಾಕುತ್ತಾರೆ. ಅವರವರ ಉಡುಗೆ ಅವರ ಇಚ್ಛೆ” ಎಂದರು.
ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹೇಳಿರುವುದೇ ಬೇರೆ ಅರ್ಥದಲ್ಲಿ. ನೀವು ಯಾಕೆ ತಂದಿಡುವುದಕ್ಕೆ, ಬೇಳೆ ಬೇಯಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೀರಿ. ಅಶೋಕ್ ಅವರು ಮೊದಲು ಪ್ರಧಾನ ಮೋದಿ ಅವರು ಕುಂಭ ಮೇಳದಲ್ಲಿ ಭಾಗವಹಿಸುತ್ತಿರುವುದನ್ನು ಪ್ರಶ್ನಿಸಲಿ. ಅವರ ಪಕ್ಷದ ನಾಯಕರು, ವಿದೇಶದ ನಾಯಕರು ಭಾಗವಹಿಸುತ್ತಿರುವುದನ್ನು ಟೀಕಿಸಿದ ಬಳಿಕ, ನಾನು ಪ್ರತಿಕ್ರಿಯಿಸುವೆ” ಎಂದರು.
‘ಜಿಮ್’ ಬಳಿಕ 2ನೇ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ
ಎರಡನೇ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, “ಬೃಹತ್ ಕೈಗಾರಿಕೆ ಸಚಿವರು, ಎರಡನೇ ವಿಮಾನ ನಿಲ್ದಾಣದ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಅಂತಿಮ ನಿರ್ಧಾರದ ಬಗ್ಗೆ ನನ್ನ ಬಳಿ, ಸಿಎಂ ಬಳಿ ಚರ್ಚೆ ಮಾಡಿಲ್ಲ. ಪ್ರಾಥಮಿಕ ಸಭೆ ಮಾತ್ರ ಆಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮುಗಿದ ನಂತರ ನಾವು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.
ಸಂಪುಟ ಸಭೆಯಲ್ಲಿ ನೀರಿನ ದರ ಏರಿಕೆ ಚರ್ಚೆ
ನೀರಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಬೇಕು” ಎಂದು ತಿಳಿಸಿದರು.