ಬೆಂಗಳೂರು : ಜನಸಾಮಾನ್ಯರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನವನ್ನು ಪರಿಣಾಮಕಾರಿಯಾಗಿ ಹಾಗೂ ಸದ್ಬಳಕೆಯಾಗುವ ರೀತಿಯಲ್ಲಿ ಬಳಸಿಕೊಳ್ಳಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನವೀಕರಿಸುವ ಮೂಲಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ಯೋಜನೆಗೆ ಚಾಲನೆ ನೀಡಿದ ನಂತರ ಸಚಿವರು ಮಾತನಾಡಿದರು.
ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಟ್ಟು 13 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಉನ್ನತೀಕರಿಸಲಾಗಿದೆ. ಈ ಪೈಕಿ 10ಪಿಎಚ್ ಪೂರ್ಣಗೊಂಡಿವೆ. ಇವುಗಳನ್ನು ನಾವು ಲೋಕಾರ್ಪಣೆ ಮಾಡಿದ್ದೇವೆ. ಉಳಿದ ಮೂರು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.
ಆರೋಗ್ಯ ಮತ್ತು ಶಿಕ್ಷಣ ಜನರಿಗೆ ಅತ್ಯಂತ ಅಗತ್ಯವಿರುವ ಕ್ಷೇತ್ರಗಳಾಗಿವೆ. ಈ ನಿಟ್ಟಿನಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲು ನಮ್ಮ ಇಲಾಖೆ ಸಿಎಸ್‌ಆರ್ ಯೋಜನೆಯಡಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗ ಜಿಇ ಹೆಲ್ತ್ ಕೇರ್, ಸಿಎಸ್‌ಆರ್ ಬಾಕ್ಸ್/ಭಾರತ್ ಕೇರ್ಸ್ ಸಹಭಾಗಿತ್ವದಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗಿದ್ದೇವೆ. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸದ್ಬಳಕೆಯಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ನಮ್ಮ ಇಲಾಖೆಯು ಹಲವಾರು ಸಿಎಸ್‌ಆರ್ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿಯೂ ಜನರಿಗಾಗಿ ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸಿಎಸ್‌ಆರ್ ಬಾಕ್ಸ್/ಭಾರತ್ ಕೇರ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಮನೋವಿರಾಜ್ ಸಿಂಗ್ ಮಾತನಾಡಿ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಿಗೆ ಸಮಾನವಾದ ಮತ್ತು ಉತ್ತಮ- ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ನಾವು ಸರ್ಕಾರದ ಜೊತೆ ಕೈಜೋಡಿಸಿದ್ದೇವೆ. ಉನ್ನತೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮುದಾಯದ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳಿಗೆ ನಾವು ಕೊಡುಗೆ ನೀಡುತ್ತೇವೆ ಎಂದು ಹೇಳಿದರು.
ಜಿ ಇ ಹೆಲ್ತ್ ಕೇರ್ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಚೈತನ್ಯ ಸಾರವತೆ ಮಾತನಾಡಿ, ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ನಮ್ಮ ಸಂಸ್ಥೆಗೆ ಅವಕಾಶ ಮಾಡಿ ಕೊಟ್ಟಿರುವ ಆರೋಗ್ಯ ಸಚಿವರು ಹಾಗೂ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದರು.
ದೂರದೃಷ್ಟಿಯ ಯೋಜನೆಗಳನ್ನು ದಶಕಗಳವರೆಗೆ ಅನುಷ್ಠಾನಕ್ಕೆ ತರಲು ನಾವು ಸರ್ಕಾರದೊಂದಿಗೆ ಹೆಜ್ಜೆ ಹಾಕಲಿದ್ದೇವೆ. ಜನರಿಗೆ ಸೇವೆ ಮಾಡಲು ಹಾಗೂ ನಮ್ಮ ಜವಾಬ್ದಾರಿಯನ್ನು ಸಾಕಾರಗೊಳಿಸಲು ಅವಕಾಶ ನೀಡಿರುವ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ವಿಡಿಯೋ ಕಾನ್ಸರೆನ್ಸ್ ಮೂಲಕ ಭಾಗಿಯಾದ ರಾಯಚೂರು ಬಳಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೌಲಾಸಾಬ್ ಮುದ್ಲಾಪುರ ಮಾತನಾಡಿ, ಸಿಎಸ್‌ಆರ್ ಯೋಜನೆಯಡಿ ದೊರೆತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಲವಾರು ಪಿಎಚ್‌ಸಿಗಳ ವೈದ್ಯಾಧಿಕಾರಿಗಳು ವೀಡಿಯೋ ಕಾನ್ಸರೆನ್ಸ್ ಮೂಲಕ ಭಾಗಿಯಾಗಿದ್ದರು.