ಬೆಂಗಳೂರು : ಪತ್ನಿಯ ಆರ್ಥಿಕ ಹಕ್ಕು ಕಸಿಯುವುದೂ ಕೂಡ ಕೌಟುಂಬಿ ದೌರ್ಜನ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ, ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮಹಿಳೆಯೊಬ್ಬರಿಗೆ ಪತಿಯಿಂದ ಹಣಕಾಸು ಪರಿಹಾರ ಕಲ್ಪಿಸಿದ್ದ ಆದೇಶ ರದ್ದುಪಡಿಸಿದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶವನ್ನು ಬದಿಗೆ ಸರಿಸಿ ಪರಿಹಾರ ನೀಡುವಂತೆ ಆದೇಶಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನ ಅರ್ಫಾ ಮತ್ತು ಅಹ್ಮದ್ 2012ರ ಏ.1ರಂದು ಮದುವೆಯಾಗಿದ್ದರು. ಆದರೆ 2012ರ ಮೇ ತಿಂಗಳಲ್ಲಿ ಅರ್ಫಾ ಅವರನ್ನು ಅಹ್ಮದ್ ಕುಟುಂಬ ಮನೆಯಿಂದ ಹೊರಹಾಕಿತ್ತು. ಇದರಿಂದ ಅರ್ಫಾ ಕೌಟುಂಬಿಕ ದೌರ್ಜನ್ಯ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದರು. ಕೌಟುಂಬಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿಗೆ ಮನೆ ಬಾಡಿಗೆಗಾಗಿ ಮಾಸಿಕ 4,000 ಮತ್ತು ಜೀವನ ನಿರ್ವಹಣೆಗಾಗಿ 5,000 ರು. ಪಾವತಿಸುವಂತೆ ಆಹ್ಮದ್ ಗೆ 2014ರ ಜೂ.30ರಂದು ಕೋರ್ಟ್ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅಹ್ಮದ್ ಮೇಲ್ಮನವಿ ಸಲ್ಲಿಸಿದ್ದರು.
ಪತ್ನಿಗೆ ಪತಿ ಹಣಕಾಸು ನೆರವು ನೀಡಿಲ್ಲ, ಪರಿಹಾರ ಪಾವತಿಸಿಲ್ಲ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ ಪ್ರಕಾರ, ಮಹಿಳೆಯ ಆರ್ಥಿಕ, ಹಣಕಾಸು ಸಂಪ ನ್ಯೂಲ ಕಿತ್ತುಕೊಳ್ಳುವುದು ಸಹ ದೌರ್ಜನ್ಯ. ಆದ್ದರಿಂದ ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸಿ ಮ್ಯಾಜಿ ಸ್ಟೇಟ್ ನ್ಯಾಯಾಲಯದ ತೀರ್ಪು ಎತ್ತಿ ಹಿಡಿಯಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ.